ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಅಧ್ಯಕ್ಷ ಲಲಿತ್ ಮೋದಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಆತನ ‘ಡಿ-ಕಂಪನಿ’ಯಿಂದ ಬಂದ ನಿರಂತರ ಜೀವಬೆದರಿಕೆಗಳೇ ತಾವು ಕ್ರಿಕೆಟ್ ಆಡಳಿತದಿಂದ ಶಾಶ್ವತವಾಗಿ ದೂರಾಗಲು ಪ್ರಮುಖ ಕಾರಣ ಎಂದು ಲಲಿತ್ ಮೋದಿ ಸ್ಫೋಟಕ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಬೆದರಿಕೆ, ಹತ್ಯೆಯ ಯತ್ನಗಳು ಹಾಗೂ ಲಂಡನ್‌ನಲ್ಲಿ ತಡರಾತ್ರಿ ಸ್ಯಾಟಲೈಟ್ ಫೋನ್ ಮೂಲಕ ದಾವೂದ್ ಜೊತೆ ನಡೆಸಿದ ಸಂಭಾಷಣೆಯ ಕರಾಳ ನೆನಪುಗಳನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.
ಲಂಡನ್‌ನಲ್ಲಿ ನಡೆದ ಆ ಭೀಕರ ರಾತ್ರಿಯ ಮುಖಾಮುಖಿ
ಅಕ್ರಮ ಬೆಟ್ಟಿಂಗ್ ಜಾಲಕ್ಕೆ ಸಹಕರಿಸಲು ನಿರಾಕರಿಸಿದ್ದೇ ತಾವು ಡಿ-ಕಂಪನಿಯ ಪ್ರಮುಖ ಟಾರ್ಗೆಟ್ ಆಗಲು ಕಾರಣ ಎಂದು ಮೋದಿ ತಿಳಿಸಿದ್ದಾರೆ. 2012ರಲ್ಲಿ ಲಂಡನ್‌ನಲ್ಲಿ ನಡೆದ ಘಟನೆಯೊಂದನ್ನು ಸ್ಮರಿಸಿರುವ ಅವರು, ಮಧ್ಯವರ್ತಿಯೊಬ್ಬನ ಒತ್ತಾಯದ ಮೇರೆಗೆ ರಾತ್ರಿ ೩:೩೦ರ ಸುಮಾರಿಗೆ ಪೆಂಟ್ ಹೌಸ್ ಒಂದಕ್ಕೆ ತೆರಳಿದ್ದರಂತೆ. ಅಲ್ಲಿ ‘ಬಾಬಾ’ ಎಂದು ಕರೆಯಲ್ಪಡುವ ವ್ಯಕ್ತಿಯೊಬ್ಬ ಸ್ಯಾಟಲೈಟ್ ಫೋನ್ ಮೂಲಕ ದಾವೂದ್ ಇಬ್ರಾಹಿಂಗೆ ಕರೆ ಮಾಡಿ ಸ್ಪೀಕರ್ ಆನ್ ಮಾಡಿದ್ದನು. ಆ ಕ್ಷಣದ ಭಯವನ್ನು ವಿವರಿಸಿರುವ ಮೋದಿ, ಆ ಬೆದರಿಕೆಯ ಕರೆಗೆ ತಾವು ಅಕ್ಷರಶಃ ಬೆಚ್ಚಿಬಿದ್ದಿದ್ದಾಗಿ ಒಪ್ಪಿಕೊಂಡಿದ್ದಾರೆ. ದಾವೂದ್, “ಇಂದಿನಿಂದ ನಿನ್ನ ಎಲ್ಲಾ ಕೆಲಸಗಳು ಮುಕ್ತಾಯವಾಗಿವೆ” ಎಂದು ಕೇವಲ ಒಂದೇ ವಾಕ್ಯದಲ್ಲಿ ಎಚ್ಚರಿಕೆ ನೀಡಿ ಕರೆ ಕಡಿತಗೊಳಿಸಿದ್ದನು. ಇದಾದ ಬಳಿಕ ವಾರಕ್ಕೊಮ್ಮೆ ಬೆದರಿಕೆ ಕರೆಗಳು ಬರಲು ಆರಂಭವಾದವು ಹಾಗೂ ಐಪಿಎಲ್ ಫ್ರಾಂಚೈಸಿಯೊಂದರ ನಿಯಂತ್ರಣವನ್ನು ಭೂಗತ ಜಗತ್ತು ಬಯಸಿತ್ತು ಎಂದು ಅವರು ವಿವರಿಸಿದ್ದಾರೆ.
ದಕ್ಷಿಣ ಆಫ್ರಿಕಾಕ್ಕೆ ಐಪಿಎಲ್ ಸ್ಥಳಾಂತರ ಮತ್ತು ಬೆಟ್ಟಿಂಗ್ ಜಾಲಕ್ಕೆ ಪೆಟ್ಟು
ಭೂಗತ ಜಗತ್ತು ಲಲಿತ್ ಮೋದಿ ವಿರುದ್ಧ ತಿರುಗಿಬೀಳಲು ಪ್ರಮುಖ ಕಾರಣ 2009ರ ಐಪಿಎಲ್ ಟೂರ್ನಿ. ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದ ಕಾರಣ ಐಪಿಎಲ್ ಅನ್ನು ದಿಢೀರನೆ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಯಿತು. ಇದು ಬೃಹತ್ ಅಕ್ರಮ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಟೂರ್ನಿ ರದ್ದಾಗಲಿದೆ ಎಂದು ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ಕಟ್ಟಿದ್ದ ಬುಕ್ಕಿಗಳು ಭಾರೀ ನಷ್ಟ ಅನುಭವಿಸಿದ್ದರು. ಈ ನಷ್ಟದ ಹಣವನ್ನು ಭರಿಸಿಕೊಡುವಂತೆ ಭೂಗತ ಪಾತಕಿಗಳು ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಮೋದಿ ಹೇಳಿಕೊಂಡಿದ್ದಾರೆ. ಅಲ್ಲದೆ, ತಾವು ಐಪಿಎಲ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸ್ಪಾಟ್ ಫಿಕ್ಸಿಂಗ್ ತಡೆಗಟ್ಟಲು ತೆಗೆದುಕೊಂಡ ಕಠಿಣ ಕ್ರಮಗಳು ಮತ್ತು ಕೋಟ್ಯಂತರ ರೂಪಾಯಿ ಲಂಚವನ್ನು ತಿರಸ್ಕರಿಸಿದ್ದೇ ಮಾಫಿಯಾದ ಆಕ್ರೋಶಕ್ಕೆ ಕಾರಣವಾಗಿತ್ತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
ಸರಣಿ ಹತ್ಯೆ ಯತ್ನಗಳು ಹಾಗೂ ಕ್ರಿಕೆಟ್‌ನಿಂದ ವಿದಾಯ
ಮಾಫಿಯಾದ ಜೊತೆಗಿನ ಈ ಸಂಘರ್ಷದಿಂದಾಗಿ ತಮ್ಮ ಮೇಲೆ ಹಲವು ಬಾರಿ ಹತ್ಯೆ ಯತ್ನಗಳು ನಡೆದವು ಎಂದು ಲಲಿತ್ ಮೋದಿ ಆಘಾತಕಾರಿ ಮಾಹಿತಿ ನೀಡಿದ್ದಾರೆ. ಮುಂಬೈನಲ್ಲಿರುವ ತಮ್ಮ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ, ಜೋಹಾನ್ಸ್‌ಬರ್ಗ್‌ನಲ್ಲಿ ವಿಫಲವಾದ ಹತ್ಯೆ ಯತ್ನ, ಕ್ರೊಯೇಷಿಯಾ ಗಡಿಯಲ್ಲಿನ ಸಂಚು ಹಾಗೂ ಲಂಡನ್‌ನಲ್ಲಿ ತಮ್ಮ ಮಗನ ಅಪಹರಣಕ್ಕೆ ನಡೆದ ಯತ್ನಗಳನ್ನು ಅವರು ಉಲ್ಲೇಖಿಸಿದ್ದಾರೆ. ಅಂತಿಮವಾಗಿ ಈ ಜೀವಬೆದರಿಕೆಗಳಿಂದ ಪಾರಾಗಲು ತಾವು ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಮಾತು ಕೊಟ್ಟು, ಆಡಳಿತದಿಂದ ಸಂಪೂರ್ಣವಾಗಿ ಹೊರಬಂದಿದ್ದಾಗಿ ಮೋದಿ ಸ್ಪಷ್ಟಪಡಿಸಿದ್ದಾರೆ.
ಬಿಸಿಸಿಐ ನಿಷೇಧ ಮತ್ತು ಮೋದಿಯ ವಾದ
೨೦೦೮ರಲ್ಲಿ ಐಪಿಎಲ್ ಆರಂಭಿಸಿ ಭಾರತೀಯ ಕ್ರಿಕೆಟ್‌ನ ಆರ್ಥಿಕತೆಯನ್ನೇ ಬದಲಾಯಿಸಿದ ಕೀರ್ತಿ ಲಲಿತ್ ಮೋದಿ ಅವರಿಗೆ ಸಲ್ಲುತ್ತದೆ. ಆದರೆ, ಹಣಕಾಸು ಅಕ್ರಮಗಳು ಮತ್ತು ಆಡಳಿತಾತ್ಮಕ ದುರಾಡಳಿತದ ಆರೋಪದ ಮೇಲೆ ೨೦೧೦ರಲ್ಲಿ ಬಿಸಿಸಿಐ ಅವರನ್ನು ಅಮಾನತುಗೊಳಿಸಿತ್ತು. ವಿಚಾರಣೆಯ ಬಳಿಕ ೨೦೧೩ರಲ್ಲಿ ಭಾರತದಲ್ಲಿ ಯಾವುದೇ ಕ್ರಿಕೆಟ್ ಆಡಳಿತ ಹುದ್ದೆ ಏರದಂತೆ ಆಜೀವ ನಿಷೇಧ ಹೇರಲಾಗಿತ್ತು. ಭಾರತೀಯ ತನಿಖಾ ಸಂಸ್ಥೆಗಳು ಕಳೆದೊಂದು ದಶಕದಿಂದ ಹಣಕಾಸು ದುರುಪಯೋಗ ಪ್ರಕರಣಗಳ ತನಿಖೆ ನಡೆಸುತ್ತಿದ್ದರೂ, ಲಲಿತ್ ಮೋದಿ ಮಾತ್ರ ತಾವು ಭಾರತ ತೊರೆಯಲು ಮತ್ತು ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಮುಂಬೈ ಭೂಗತ ಜಗತ್ತಿನ ಬೆದರಿಕೆಗಳೇ ಮೂಲ ಕಾರಣ ಎಂದು ತಮ್ಮ ಹಳೆಯ ವಾದವನ್ನೇ ಮತ್ತೆ ಬಲವಾಗಿ ಪ್ರತಿಪಾದಿಸಿದ್ದಾರೆ.


















