ಬೀದರ್ : ಜಿಲ್ಲೆಯ ಹುಲಸೂರು ಪಟ್ಟಣದ ಮೊಮಿನ್ ಕಾಲೋನಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ವಿದ್ಯುತ್ ತಂತಿ ತಗುಲಿ 8 ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ಅಲಿ ಎಂದು ಗುರುತಿಸಲಾಗಿದೆ.
ಬಿರುಗಾಳಿ ಸಹಿತ ಸುರಿದ ಮಳೆಯಿಂದ ವಿದ್ಯುತ್ ಕಂಬದಿಂದ ಮನೆಗೆ ಸಂಪರ್ಕ ಕಲ್ಪಿಸಲಾಗಿದ್ದ ಕೇಬಲ್ ಕಟ್ ಆಗಿ ನೆಲಕ್ಕೆ ಬಿದ್ದಿತ್ತು. ಈ ವೇಳೆ ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಬಾಲಕ ಅಲಿ ಕೈಯಿಂದ ಹಿಡಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯಿಂದ ಕುಟುಂಬಸ್ಥರು ಮತ್ತು ಸ್ಥಳೀಯರು ಕಂಗಾಲಾಗಿದ್ದು, ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸಂಜೆ ನಡೆದ ಈ ಘಟನೆ ಸಂಬಂಧ ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಾಲಕನ ಅಕಾಲಿಕ ಸಾವಿನಿಂದ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ : ಮೇಲಧಿಕಾರಿಗಳ ಕಿರುಕುಳ ಆರೋಪ – ಗ್ರಾಮ ಆಡಳಿತಾಧಿಕಾರಿ ನೇಣು ಬಿಗಿದು ಆತ್ಮಹತ್ಯೆ!


















