ಚಿಕ್ಕಮಗಳೂರು : ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಯುವಕನೊಬ್ಬ ರೀಲ್ಸ್‌ಗಾಗಿ ನಡೆಸಿದ ಅಪಾಯಕಾರಿ ಸಾಹಸ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ನಿಷೇಧಿತ ಅರಣ್ಯ ಪ್ರದೇಶದೊಳಗೆ ಜೀಪ್‌ನಲ್ಲಿ ಪ್ರವೇಶಿಸಿದ ಯುವಕ, ಕಾಡಾನೆಯ ಸಮೀಪಕ್ಕೆ ತೆರಳಿ ವಾಹನ ಚಲಾಯಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಯುವಕ ತೆರದ ಜೀಪ್‌ನಲ್ಲಿ ನಿಷೇಧಿತ ಪ್ರದೇಶದೊಳಗೆ ಸಂಚರಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಕಾಡಾನೆಯ ಬಳಿ ಜೀಪ್ ತೆಗೆದುಕೊಂಡು ಹೋಗಿದ್ದು, ವಾಹನವನ್ನು ಕಂಡ ಆನೆ ಜೀಪ್‌ನತ್ತ ಅಟ್ಟಿಸಿಕೊಂಡು ಬಂದಿರುವ ದೃಶ್ಯವೂ ಸೆರೆಯಾಗಿದೆ. ಕಾಡು ಪ್ರಾಣಿಗಳ ಜೀವಕ್ಕೂ, ತಮ್ಮ ಸುರಕ್ಷತೆಗೂ ಅಪಾಯ ಉಂಟುಮಾಡುವ ರೀತಿಯಲ್ಲಿ ವರ್ತಿಸಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಎನ್.ಆರ್.ಪುರ ತಾಲೂಕಿನ ಭದ್ರಾ ಹಿನ್ನೀರಿನ ಪ್ರದೇಶದಲ್ಲಿ, ಮುಳುಗಡೆ ಪ್ರದೇಶದಲ್ಲಿರುವ ಭವಾನಿ ಶಂಕರ ದೇವಾಲಯದ ಸುತ್ತಮುತ್ತಲಿನ ನಿಷೇಧಿತ ವಲಯದಲ್ಲಿ ನಡೆದಿದೆ ಎನ್ನಲಾಗಿದೆ. ಹೆಬ್ಬೆ ಭಾಗದ ಹುಲಿ ಸಂರಕ್ಷಿತ ಪ್ರದೇಶದೊಳಗೆ ಜೀಪ್‌ನಲ್ಲಿ ಸಫಾರಿ ನಡೆಸಿರುವುದು ಅರಣ್ಯ ನಿಯಮಗಳ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ವಿಡಿಯೋ ವೈರಲ್ ಆದ ಬಳಿಕ ಅರಣ್ಯ ಇಲಾಖೆಯ ಕ್ರಮದ ಕುರಿತು ಸಾರ್ವಜನಿಕರು ಪ್ರಶ್ನೆ ಎತ್ತಿದ್ದು, ನಿಷೇಧಿತ ಪ್ರದೇಶದೊಳಗೆ ಪ್ರವೇಶಿಸಿ ಕಾಡು ಪ್ರಾಣಿಗಳಿಗೆ ತೊಂದರೆ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮಗನನ್ನೇ ಕೊಂದು, ಸ್ಮಶಾನದಲ್ಲಿ ಹೂತು ಹಾಕಿ ಕೋರ್ಟ್ ಮೆಟ್ಟಿಲೇರಿದ “ಮಹಾತಾಯಿ”!


















