ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಾಳೆ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಲೋಕಭವನದ ಗಾಜಿನ ಮನೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ದೇಶ ಹಾಗೂ ರಾಜ್ಯದ ಅತಿಗಣ್ಯವ್ಯಕ್ತಿಗಳು ಸೇರಿ ಅನೇಕ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.
ಲೋಕಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಿಮಿತ್ತ ಹೆಚ್ಚಿನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಜೂನ್ 3ರ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8ರ ವರೆಗೆ ಕೆಲ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರಿನ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಎಲ್ಲೆಲ್ಲಿ ಸಂಚಾರ ನಿರ್ಬಂಧ?
- ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಓ. ಜಂಕ್ಷನ್ ವರೆಗೆ ಹಾಗೂ ಸಿ.ಟಿ.ಓ. ವೃತ್ತದಿಂದ ಲೋಕಭವನದವರೆಗೆ
- ಬಾಳೇಕುಂದ್ರಿ ಜಂಕ್ಷನ್‌ನಿಂದ ಅಂಬೇಡ್ಕರ್ ರಸ್ತೆ ಕಡೆಗೆ
- ಡಾ. ಅಂಬೇಡ್ಕರ್ ರಸ್ತೆಯಲ್ಲಿ ಕೆ.ಆರ್. ಸರ್ಕಲ್ ಕಡೆಯಿಂದ ಕಾಫಿಬೋರ್ಡ್ ಜಂಕ್ಷನ್‌ವರೆಗೆ
- ರೇಸ್‌ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್‌ನಿಂದ ಸುಬ್ಬಣ್ಣ ಜಂಕ್ಷನ್ ವರೆಗೆ, ಜೆ.ಡಿ.ಎಸ್ ಕ್ರಾಸ್‌ನಿಂದ ಸುಬ್ಬಣ್ಣ ಜಂಕ್ಷನ್ ವರೆಗೆ
- ಕ್ಲೀನ್ಸ್ ಜಂಕ್ಷನ್ ಕಡೆಯಿಂದ ಸಿ.ಟಿ.ಓ ಕಡೆಗೆ
- ಕ್ಲೀನ್ಸ್ ಜಂಕ್ಷನ್‌ನಲ್ಲಿ ಸೆಂಟ್ ಮಾರ್ಕ್ಸ್ ರಸ್ತೆಯಿಂದ ಸಿ.ಟಿ.ಓ. ಜಂಕ್ಷನ್ ಕಡೆಗೆ
ಈ ಮೇಲಿನ ಮಾರ್ಗಗಳಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿರುವ ವಾಹನಗಳನ್ನು ಹೊರತುಪಡಿಸಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು
- ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಓ. ಜಂಕ್ಷನ್ ವರೆಗೆ ಹಾಗೂ ಸಿ.ಟಿ.ಓ. ವೃತ್ತದಿಂದ ಲೋಕಭವನದವರೆಗೆ ಸಂಚರಿಸುವ ವಾಹನಗಳು ಬಿ.ಆರ್.ವಿ. ಜಂಕ್ಷನ್ ಬಳಿ ಶಿವಾಜಿನಗರ ಕಡೆಗೆ ಬಲತಿರುವು ಹಾಗೂ ಅನಿಲ್ ಕುಂಬ್ಳೆ ಜಂಕ್ಷನ್ ಕಡೆಗೆ ಎಡತಿರುವು ಪಡೆದು ಸಂಚರಿಸಬಹುದಾಗಿದೆ.
- ಕ್ಲೀನ್ಸ್ ರಸ್ತೆ ಹಾಗೂ ಶಿವಾಜಿನಗರ ಕಡೆಯಿಂದ ಬರುವ ವಾಹನಗಳು ಬಾಳೇಕುಂದ್ರಿ ಜಂಕ್ಷನ್ ಬಳಿ ಕನ್ನಿಂಗ್‌ಹ್ಯಾಮ್ ರಸ್ತೆಯ ಮುಖಾಂತರ ಸಂಚರಿಸಬಹುದಾಗಿದೆ.
- ಕೆ.ಆರ್. ಸರ್ಕಲ್ ಕಡೆಯಿಂದ ಕಾಫಿಬೋರ್ಡ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ನೃಪತುಂಗ ರಸ್ತೆಯ ಮುಖಾಂತರ ಸಂಚರಿಸಬಹುದಾಗಿದೆ.
- ರೇಸ್‌ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್‌ನಿಂದ ಸುಬ್ಬಣ್ಣ ಜಂಕ್ಷನ್ ವರೆಗೆ ಸಂಚರಿಸುವ ವಾಹನಗಳು ಟ್ರಿಲೈಟ್ ಜಂಕ್ಷನ್ ಕಡೆಯಿಂದ ಶಿವಾನಂದ ಜಂಕ್ಷನ್ ಮೂಲಕ ಎಸ್.ಸಿ. ರಸ್ತೆ ಜಂಕ್ಷನ್ ತಲುಪಿ ಎಡತಿರುವು ಪಡೆದು ಸಂಚರಿಸಬಹುದಾಗಿದೆ.
- ಕ್ಲೀನ್ಸ್ ಜಂಕ್ಷನ್ ಕಡೆಯಿಂದ ಲೋಕ ಭವನದ ಕಡೆಗೆ ಸಂಚರಿಸುವ ವಾಹನಗಳು ಅನಿಲ್ ಕುಂಬ್ಳೆ ಹಾಗೂ ಬಿ.ಆರ್.ವಿ. ಜಂಕ್ಷನ್ ಮುಖಾಂತರ ಸಂಚರಿಸಬಹುದಾಗಿದೆ.
- ಹಲಸೂರು ಮತ್ತು ಹಳೆ ಏರ್‌ಪೋರ್ಟ್ ಕಡೆಯಿಂದ ಕೆಂಪೇಗೌಡ ಏರ್‌ಪೋರ್ಟ್ ಮತ್ತು ಬಸವೇಶ್ವರ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳ ಸವಾರರು ಬಿ.ಆರ್.ವಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಶಿವಾಜಿನಗರ ಬಸ್‌ನಿಲ್ದಾಣ ಮೂಲಕ ಬಾಳೆಕುಂದ್ರಿ ಜಂಕ್ಷನ್, ಕನ್ನಿಂಗ್ ಹ್ಯಾಂ ರಸ್ತೆ, ವಸಂತನಗರದಿಂದ ಹೆಬ್ಬಾಳ ಕಡೆಗೆ ಸಂಚರಿಸುವುದು.
- ಹಲಸೂರು ಮತ್ತು ಹಳೇ ಮದ್ರಾಸ್ ರಸ್ತೆ ಕಡೆಯಿಂದ ಹೆಬ್ಬಾಳ ಕಡೆಗೆ ಸಂಚರಿಸುವ ವಾಹನಗಳ ಸವಾರರು ಹಲಸೂರು ಲೇಕ್ ಮೂಲಕ ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿಯಿಂದ ರಿಂಗ್ ರಸ್ತೆಯ ಮೂಲಕ ಹೆಬ್ಬಾಳ ಕಡೆಗೆ ಸಂಚರಿಸುವುದು.
- ಆಶೀರ್ವಾದಂ ವೃತ್ತ ಹಾಗೂ ಎಂ.ಜಿ. ರಸ್ತೆ ಕಡೆಯಿಂದ ಬರುವಂತಹ ವಾಹನಗಳು ಬಿ.ಆರ್.ವಿ ಜಂಕ್ಷನ್ ಶಿವಾಜಿನಗರ ಬಸ್‌ನಿಲ್ದಾಣ ಮೂಲಕ ಬಾಳೆಕುಂದ್ರಿ ಜಂಕ್ಷನ್, ಕನ್ನಿಂಗ್ ಹ್ಯಾಂ ರಸ್ತೆ, ವಸಂತನಗರದಿಂದ ಹೆಬ್ಬಾಳ ಕಡೆಗೆ ಸಂಚರಿಸುವುದು.
ಇದನ್ನೂ ಓದಿ : ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ – ದಿಢೀರ್ ರಾಜೀನಾಮೆ ಸಲ್ಲಿಸಿದ್ದೇಕೆ ತಮಿಳುನಾಡು ಸಿಂಗಂ?


















