ಅಹಮದಾಬಾದ್ : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ತಂಡವು, ಒಂದು ಕಾಲದಲ್ಲಿ ಪ್ರಶಸ್ತಿ ಗೆಲ್ಲದ ತಂಡ ಎಂಬ ಹಣೆಪಟ್ಟಿಯನ್ನು ಕಳಚಿಕೊಂಡು ಇದೀಗ ಬಲಿಷ್ಠ ಹಾಗೂ ಯಶಸ್ವಿ ಫ್ರಾಂಚೈಸಿಯಾಗಿ ರೂಪುಗೊಂಡಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಕ್ರೀಡಾ ಲೋಕದ ಗಣ್ಯರು, ಅಭಿಮಾನಿಗಳು ತಂಡಕ್ಕೆ ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಇದೇ ವೇಳೆ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಆರ್‌ಸಿಬಿ ಗೆಲುವಿಗೆ ವಿಶಿಷ್ಟವಾಗಿ ಅಭಿನಂದನೆ ಸಲ್ಲಿಸಿದ್ದು, ಅವರ ತಮಾಷೆಯ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರ್‌ಸಿಬಿಗೆ ನಾನೇ ಲಕ್ಕಿ ಚಾರ್ಮ್ ಎಂದ ಸಿಂಧು
ಆರ್‌ಸಿಬಿ ತಂಡವು ಸತತವಾಗಿ ಕಪ್ ಗೆಲ್ಲುತ್ತಿರುವುದರ ಹಿಂದೆ ತಾನೇ “ಲಕ್ಕಿ ಚಾರ್ಮ್” (ಅದೃಷ್ಟದ ದೇವತೆ) ಎಂದು ಪಿ.ವಿ. ಸಿಂಧು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ತರಬೇತಿಗಾಗಿ ಹೈದರಾಬಾದ್‌ನಿಂದ ಬೆಂಗಳೂರಿಗೆ ವಾಸ್ತವ್ಯ ಬದಲಿಸಿದ್ದ ಸಿಂಧು, ತಮ್ಮ ಈ ನಡೆಯನ್ನೇ ಆರ್‌ಸಿಬಿಯ ಸತತ ಗೆಲುವಿನ ಜೊತೆ ತಳುಕು ಹಾಕಿದ್ದಾರೆ. “ಆರ್‌ಸಿಬಿ ಅಭಿಮಾನಿಗಳೇ, ನಾನೇ ನಿಮ್ಮ ಲಕ್ಕಿ ಚಾರ್ಮ್ ಎಂದು ಹೇಳುತ್ತಿಲ್ಲ. ಆದರೆ, ನಾನು ಬೆಂಗಳೂರಿಗೆ ಬಂದು ನೆಲೆಸಿದಾಗಿನಿಂದ ನೀವು ಪ್ರತಿ ವರ್ಷ ಟ್ರೋಫಿ ಗೆಲ್ಲುತ್ತಿದ್ದೀರಿ. ಇದರ ಹಿಂದಿನ ಲೆಕ್ಕಾಚಾರ ನೀವೇ ಅರ್ಥ ಮಾಡಿಕೊಳ್ಳಿ” ಎಂದು ಹಾಸ್ಯಭರಿತವಾಗಿ ಬರೆದುಕೊಂಡಿದ್ದಾರೆ. ಇದರ ಜೊತೆಗೆ ಆಟಗಾರರು, ಸಿಬ್ಬಂದಿ ವರ್ಗ, ಫ್ರಾಂಚೈಸಿ ಮಾಲೀಕರು ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಭಾವನಾತ್ಮಕವಾಗಿ ಬೆಂಬಲಿಸಿದ ಅಭಿಮಾನಿಗಳಿಗೆ ಸಲಾಂ
ಅದೆಷ್ಟೋ ವರ್ಷಗಳ ಕಾಲ ನಿರಾಸೆ, ಹೃದಯಭಂಗ ಹಾಗೂ ನೋವುಗಳನ್ನು ಅನುಭವಿಸಿದರೂ, ತಂಡದ ಮೇಲಿನ ನಂಬಿಕೆ ಮತ್ತು ಪ್ರೀತಿಯನ್ನು ಕಳೆದುಕೊಳ್ಳದ ಆರ್‌ಸಿಬಿ ಅಭಿಮಾನಿಗಳ ನಿಷ್ಠೆಯನ್ನು ಸಿಂಧು ಮುಕ್ತಕಂಠದಿಂದ ಕೊಂಡಾಡಿದ್ದಾರೆ. “ಈ ಫ್ರಾಂಚೈಸಿ ಅದೆಷ್ಟೋ ಭಾವನೆಗಳು, ಹುಚ್ಚು ಅಭಿಮಾನ ಹಾಗೂ ಪ್ರೀತಿಯನ್ನು ಹೊತ್ತು ತಂದಿದೆ. ಸತತವಾಗಿ ಎರಡು ಬಾರಿ ಚಾಂಪಿಯನ್ ಆಗಿರುವುದನ್ನು ನೋಡುವುದು ನಿಜಕ್ಕೂ ಅದ್ಭುತ” ಎಂದಿದ್ದಾರೆ. ಅಲ್ಲದೆ, ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗಿದ್ದರೆ ಇನ್ನಷ್ಟು ರೋಮಾಂಚಕಾರಿಯಾಗಿರುತ್ತಿತ್ತು. ಆ ಪಂದ್ಯ ನಮ್ಮೆಲ್ಲರ ಭಾವನೆಗಳನ್ನು ಅತ್ಯುತ್ತಮ ರೀತಿಯಲ್ಲಿ ಕೆದಕಿರುತ್ತಿತ್ತು. ಆದರೂ ಬೆಂಗಳೂರು ತಂಡವೇ ಈ ಗೆಲುವಿಗೆ ಸಂಪೂರ್ಣ ಅರ್ಹವಾಗಿದೆ ಎಂದು ಸಿಂಧು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾಯಕನಾಗಿ ರಜತ್ ಪಾಟಿದಾರ್ ಐತಿಹಾಸಿಕ ಸಾಧನೆ
ಆರ್‌ಸಿಬಿಯ ಈ ಅದ್ಭುತ ಗೆಲುವಿನ ಮೂಲಕ ತಂಡದ ನಾಯಕ ರಜತ್ ಪಾಟಿದಾರ್ ಅಪರೂಪದ ಸಾಧನೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಅವರ ನಂತರ ಐಪಿಎಲ್ ಟ್ರೋಫಿಯನ್ನು ಯಶಸ್ವಿಯಾಗಿ ಡಿಫೆಂಡ್ (ಸತತ ಗೆಲುವು) ಮಾಡಿಕೊಂಡ ಕೇವಲ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ಪಾಟಿದಾರ್ ಪಾತ್ರರಾಗಿದ್ದಾರೆ. ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಿದ ಅವರು, ಟೂರ್ನಿಯ 15 ಪಂದ್ಯಗಳಲ್ಲಿ 192.69ರ ಭರ್ಜರಿ ಸ್ಟ್ರೈಕ್ ರೇಟ್ ಹಾಗೂ 41.75ರ ಸರಾಸರಿಯಲ್ಲಿ 501 ರನ್ ಕಲೆಹಾಕಿದ್ದಾರೆ. ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 33 ಎಸೆತಗಳಲ್ಲಿ 93 ರನ್ ಸಿಡಿಸಿ ತಂಡದ ಫೈನಲ್ ಪ್ರವೇಶದಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ತಂಡದ ಒಗ್ಗಟ್ಟಿನ ಪ್ರದರ್ಶನವೇ ಈ ಭಾರಿ ಗೆಲುವಿಗೆ ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ : RCBಗೆ ಆಘಾತ ; ಟಿಮ್ ಡೇವಿಡ್‌ಗೆ ಕಂಟಕವಾದ ಅತಿರೇಕದ ವರ್ತನೆ.. ನಿಷೇಧದ ಶಿಕ್ಷೆ!



















