ನವದೆಹಲಿ : ಸಿಬಿಎಸ್ಇ (ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ) ನಡೆಸಿದ 12ನೇ ತರಗತಿಯ ಡಿಜಿಟಲ್ ಮೌಲ್ಯಮಾಪನ ಪ್ರಕ್ರಿಯೆಯು ಇದೀಗ ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಿಬಿಎಸ್‌ಇ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ವೃತ್ತಿಪರ ಸ್ಕ್ಯಾನರ್‌ಗಳ ಬದಲಿಗೆ ಕೇವಲ ಮೊಬೈಲ್ ಫೋನ್‌ಗಳನ್ನು ಬಳಸಿ ಸ್ಕ್ಯಾನ್ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ಖಾಸಗಿ ಕಂಪನಿಯೊಂದಕ್ಕೆ ಲಾಭ ಮಾಡಿಕೊಡಲು ಟೆಂಡರ್ ನಿಯಮಗಳನ್ನು ದಿಢೀರ್ ಬದಲಾಯಿಸಲಾಗಿದ್ದು, ಇದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ನಿಯಮಗಳನ್ನು ಸದ್ದಿಲ್ಲದೆ ಬದಲಾಯಿಸಿದ ಸಿಬಿಎಸ್‌ಇ
ಈ ಇಡೀ ವಿವಾದದ ಹಿನ್ನೆಲೆಯನ್ನು ಕೆದಕಿರುವ ರಾಹುಲ್ ಗಾಂಧಿ, ಸಿಬಿಎಸ್‌ಇ ಸಂಸ್ಥೆಯು 2025ರ ಮೇ ತಿಂಗಳಲ್ಲಿ ಹೊರಡಿಸಿದ್ದ ಮೊದಲ ಟೆಂಡರ್‌ನಲ್ಲಿ ಉತ್ತರ ಪತ್ರಿಕೆಗಳನ್ನು ಕನಿಷ್ಠ 300 ಡಿಪಿಐ ಗುಣಮಟ್ಟದಲ್ಲಿ, ಸ್ವಯಂಚಾಲಿತ ರೋಬೋಟಿಕ್ ಸ್ಕ್ಯಾನರ್‌ಗಳ ಮೂಲಕ ಸ್ಕ್ಯಾನ್ ಮಾಡಬೇಕು ಎಂಬ ಕಟ್ಟುನಿಟ್ಟಿನ ನಿಯಮವನ್ನು ವಿಧಿಸಿತ್ತು. ಆದರೆ, ಆಗಸ್ಟ್ ತಿಂಗಳಲ್ಲಿ ಮರುಹರಾಜು ಮಾಡಿದ ಹೊಸ ಟೆಂಡರ್‌ನಲ್ಲಿ ಈ ಎಲ್ಲ ಸುರಕ್ಷತಾ ನಿಯಮಗಳನ್ನು ಸದ್ದಿಲ್ಲದೆ ತೆಗೆದುಹಾಕಲಾಯಿತು. ಸ್ಕ್ಯಾನಿಂಗ್ ಗುಣಮಟ್ಟವನ್ನು 200 ಡಿಪಿಐಗೆ ಇಳಿಸಿ, ಕೇವಲ ಸಾಮಾನ್ಯ ಸ್ಕ್ಯಾನರ್ ಬಳಸಲು ಅನುಮತಿ ನೀಡಲಾಯಿತು. ‘ಕೋಯೆಂಪ್ಟ್ ಎಡು ಟೆಕ್’ (COEMPT Edu Teck) ಎಂಬ ಖಾಸಗಿ ಸಂಸ್ಥೆಗೆ ಟೆಂಡರ್ ಸಿಗುವಂತೆ ಮಾಡಲು ಸಿಬಿಎಸ್‌ಇ ಅಧಿಕಾರಿಗಳೇ ಈ ನಿಯಮಗಳನ್ನು ಸಡಿಲಗೊಳಿಸಿದ್ದಾರೆ ಎಂದು ರಾಹುಲ್ ಗಾಂಧಿ ದೂರಿದ್ದಾರೆ.
ಉತ್ತರ ಪತ್ರಿಕೆಯಲ್ಲಿ ನೆರಳು, ಮಡಿಕೆಗಳು; ಬಯಲಾದ ಅಕ್ರಮ
ಈ ಹಗರಣವನ್ನು ಮೊದಲು ಬೆಳಕಿಗೆ ತಂದ ಸಂಶೋಧಕ ಸಾರ್ಥಕ್ ಸಿದ್ಧಾಂತ್ ಮತ್ತು ಎಥಿಕಲ್ ಹ್ಯಾಕರ್ ನಿಸರ್ಗ್ ಅಧಿಕಾರಿಯವರ ಸಾಕ್ಷ್ಯಗಳನ್ನು ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಂಟರ್ನೆಟ್‌ನಲ್ಲಿ ಲಭ್ಯವಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಡಿಜಿಟಲ್ ಪ್ರತಿಗಳನ್ನು ಪರಿಶೀಲಿಸಿದಾಗ, ಅವುಗಳ ಮೇಲೆ ಮೊಬೈಲ್ ಫೋನ್‌ನಲ್ಲಿ ಫೋಟೋ ತೆಗೆದಾಗ ಬಿದ್ದಿರುವ ನೆರಳುಗಳು (Drop Shadows) ಮತ್ತು ಪೇಪರ್ ಮಡಚಿದ ಗುರುತುಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಇದು ಸಿಬಿಎಸ್‌ಇ ಕಂಪ್ಯೂಟರ್ ಸ್ಕ್ಯಾನರ್ ಬಳಸದೆ, ಮೊಬೈಲ್ ಫೋನ್ ಮೂಲಕವೇ ಅವಸರದಲ್ಲಿ ಫೋಟೋಗಳನ್ನು ತೆಗೆದು ಮೌಲ್ಯಮಾಪನಕ್ಕೆ ಕಳುಹಿಸಿದೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ. ಇದರಿಂದಾಗಿಯೇ ಅನೇಕ ವಿದ್ಯಾರ್ಥಿಗಳಿಗೆ ಮಸುಕಾದ ಪೇಪರ್‌ಗಳು, ಪುಟಗಳು ಕಾಣೆಯಾಗಿರುವ ಪ್ರತಿಗಳು ಸಿಕ್ಕಿವೆ ಎಂದು ತಜ್ಞರು ಆಕ್ಷೇಪಿಸಿದ್ದಾರೆ.
ಕುಸಿದ ಫಲಿತಾಂಶ; ಆತಂಕದಲ್ಲಿ 18 ಲಕ್ಷ ವಿದ್ಯಾರ್ಥಿಗಳು
ಸಿಬಿಎಸ್‌ಇ ಇತಿಹಾಸದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ಈ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ಡಿಜಿಟಲ್ ವ್ಯವಸ್ಥೆಯು ವಿದ್ಯಾರ್ಥಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಈ ಬಾರಿ 12ನೇ ತರಗತಿಯ ಒಟ್ಟಾರೆ ಫಲಿತಾಂಶವು ಶೇ.88.39ರಿಂದ ಶೇ.85.2ಕ್ಕೆ ಕುಸಿದಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ನಿರೀಕ್ಷೆಗಿಂತ ತೀರಾ ಕಡಿಮೆ ಅಂಕಗಳು ಬಂದಿವೆ ಎಂದು ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ದೆಹಲಿಯ ವಿದ್ಯಾರ್ಥಿಯೊಬ್ಬನಿಗೆ ಬೇರೊಬ್ಬರ ಉತ್ತರ ಪತ್ರಿಕೆಯನ್ನೇ ಡಿಜಿಟಲ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ನಂತರ ಸಿಬಿಎಸ್‌ಇ ಈ ತಪ್ಪನ್ನು ಒಪ್ಪಿಕೊಂಡು ಸರಿಪಡಿಸಿದೆಯಾದರೂ, ಇಂತಹ ನೂರಾರು ಎಡವಟ್ಟುಗಳು ಪೋಷಕರಲ್ಲಿ ಭೀತಿ ಹುಟ್ಟಿಸಿವೆ. ಇದಲ್ಲದೆ, ಮರುಮೌಲ್ಯಮಾಪನದ ವೆಬ್‌ಸೈಟ್ ಕೂಡ ಸರ್ವರ್ ಸಮಸ್ಯೆಯಿಂದ ಪದೇ ಪದೇ ಸ್ಥಗಿತಗೊಳ್ಳುತ್ತಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ.
ಶಿಕ್ಷಣ ಸಚಿವರ ರಾಜೀನಾಮೆಗೆ ರಾಹುಲ್ ಆಗ್ರಹ
ಈ ಇಡೀ ಹಗರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ದೇಶದ 18.5 ಲಕ್ಷ ಅಮಾಯಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಬಂದಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ತುಟಿಪಿಟಿಕ್ ಎನ್ನುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಆರಂಭದಲ್ಲಿ ಯಾವುದೇ ಲೋಪವಾಗಿಲ್ಲ ಎಂದು ವಾದಿಸುತ್ತಿದ್ದ ಸಿಬಿಎಸ್‌ಇ ಮಂಡಳಿಯು, ಈಗ ತನ್ನ ಪೋರ್ಟಲ್‌ನಲ್ಲಿ ಭದ್ರತಾ ಲೋಪಗಳಿರುವುದನ್ನು ಒಪ್ಪಿಕೊಂಡಿದೆ. ಸದ್ಯ ವ್ಯವಸ್ಥೆಯನ್ನು ಸರಿಪಡಿಸಲು ಐಐಟಿ ತಜ್ಞರು ಹಾಗೂ ಸೈಬರ್ ಸೆಕ್ಯೂರಿಟಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಇದನ್ನೂ ಓದಿ : ದಾವಣಗೆರೆ ಉಪಚುನಾವಣೆಯಲ್ಲಿ ಜಮೀರ್ ಪಕ್ಷ ವಿರೋಧಿ ಚಟುವಟಿಕೆ? ಸ್ಫೋಟಕ ಆಡಿಯೋ ವೈರಲ್!


















