ರಾಯಚೂರು : ಜಿಲ್ಲೆಯ ಮಸ್ಕಿ ಪಟ್ಟಣದ ವಾರ್ಡ್ ನಂಬರ್ 20ರ ಗಾಂಧಿ ನಗರದಲ್ಲಿ ನಕಲಿ ಸಾಧು ವೇಷಧಾರಿಗಳು ‘ಭಂಡಾರ’ (ಅರಿಶಿನ, ಕುಂಕುಮ ರೀತಿಯ ಪುಡಿ) ಎರಚಿ ಹಣ ದೋಚಿ ಪರಾರಿಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಬೆಳಿಗ್ಗೆ 8 ಗಂಟೆ ಸುಮಾರಿಗೆ ಮನೆಯಲ್ಲಿ ಒಬ್ಬರೇ ಹೆಣ್ಣು ಮಗಳು ಇದ್ದ ವೇಳೆ ಕುಟುಂಬದ ಸದಸ್ಯರ ಬಗ್ಗೆ ಮಾಹಿತಿ ಕೇಳುತ್ತಾ ಎರಡು ಹೂವುಗಳನ್ನು ನೀಡಿ ಮೂವರು ಸಾಧುಗಳು ಭಂಡಾರ (ಅರಿಶಿನ, ಕುಂಕುಮ ರೀತಿಯ ಪುಡಿ) ಎರಚಿದ್ದಾರೆ.
ಸಾಧು ವೇಷದಲ್ಲಿದ್ದ ವ್ಯಕ್ತಿ ಕೊಟ್ಟ ಭಂಡಾರವನ್ನು ಮೂಸಿದ ಬಳಿಕ ಏನಾಯಿತೋ ಗೊತ್ತಿಲ್ಲ, ಭಂಡಾರದ ವಾಸನೆಯಿಂದ ಮಂಕು ಬಡಿದಂತಾದಾಗ ಖದೀಮರು ಮನೆಯಿಂದ 5000 ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಮಹಿಳೆ ಹನುಮಮ್ಮ ತಿಳಿಸಿದ್ದಾರೆ.
ಕಳ್ಳತನ ನಡೆದಿರುವ ವಿಷಯ ತಿಳಿದ ಸಾರ್ವಜನಿಕರು ಖದೀಮರನ್ನು ಬೆನ್ನಟ್ಟಿ ಹಿಡಿದು ಮಸ್ಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ತಮ್ಮ 5000 ಹಣವನ್ನು ವಾಪಸ್ ಕೊಡಿಸುವಂತೆ ಹನುಮಮ್ಮ ಪೊಲೀಸರಿಗೆ ಮನವಿ ಮಾಡಿದ್ದಾರೆ.
ತಾಲ್ಲೂಕಿನ ವಿವಿಧೆಡೆ ಈಚೆಗೆ ನಕಲಿ ಸಾಧು-ಸಂತ ವೇಷಧಾರಿಗಳ ಚಲನವಲನ ಹೆಚ್ಚಾಗಿದ್ದು, ಅಮಾಯಕ ಜನರನ್ನು ಯಾಮಾರಿಸಿ ಹಣ ದೋಚುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಇಂತಹ ವಂಚಕರ ಮೇಲೆ ನಿಗಾವಹಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪೊಲೀಸರಿಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಹೆಬ್ಬಾಳ ಮುಖ್ಯ ರಸ್ತೆಯಲ್ಲಿ ಪಲ್ಟಿಯಾದ ಬೃಹತ್ ಲಾರಿ – ತಪ್ಪಿದ ಭಾರಿ ಅನಾಹುತ


















