ಅಹಮದಾಬಾದ್ : 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಟೂರ್ನಿಯುದ್ದಕ್ಕೂ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದ ಅವರು, ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ನೀಡುವ ಪ್ರತಿಷ್ಠಿತ ‘ಆರೆಂಜ್ ಕ್ಯಾಪ್’ ಅನ್ನು ಮುಡಿಗೇರಿಸಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಪ್ರಮುಖ ಬ್ಯಾಟರ್‌ಗಳಾದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅಲ್ಪ ಮೊತ್ತಕ್ಕೆ ಔಟಾಗುವುದರೊಂದಿಗೆ ಸೂರ್ಯವಂಶಿ ಈ ಸಾಧನೆ ಅಧಿಕೃತವಾಯಿತು.
ಕಿರಿಯ ವಯಸ್ಸಿನಲ್ಲೇ ಐತಿಹಾಸಿಕ ದಾಖಲೆ
ಕೇವಲ 15 ವರ್ಷ ಹಾಗೂ 65 ದಿನಗಳ ಪ್ರಾಯದ ವೈಭವ್ ಸೂರ್ಯವಂಶಿ, ಐಪಿಎಲ್ ಇತಿಹಾಸದಲ್ಲಿಯೇ ಆರೆಂಜ್ ಕ್ಯಾಪ್ ಗೆದ್ದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಕಳೆದ ವರ್ಷ ಸಾಯಿ ಸುದರ್ಶನ್ (23 ವರ್ಷ, 237 ದಿನ) ನಿರ್ಮಿಸಿದ್ದ ಕಿರಿಯ ಆಟಗಾರನ ದಾಖಲೆಯನ್ನು ಈ ಬಾಲಕ ಅಳಿಸಿಹಾಕಿದ್ದಾರೆ. ಈ ಋತುವಿನಲ್ಲಿ ಆಡಿದ 16 ಪಂದ್ಯಗಳಿಂದ 48.5ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಸೂರ್ಯವಂಶಿ, 237.3ರ ಅತ್ಯದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 776 ರನ್ ಕಲೆಹಾಕುವ ಮೂಲಕ ಅಗ್ರಸ್ಥಾನಕ್ಕೇರಿದರು.
ದಿಗ್ಗಜರನ್ನು ಹಿಂದಿಕ್ಕಿದ ಯುವ ತಾರೆ
ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 97 ರನ್ ಹಾಗೂ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 96 ರನ್ ಸಿಡಿಸುವ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅವರು ಬಹುದೊಡ್ಡ ಮುನ್ನಡೆ ಸಾಧಿಸಿದ್ದರು. ಫೈನಲ್ ಪಂದ್ಯಕ್ಕೂ ಮುನ್ನ ಗುಜರಾತ್ ನಾಯಕ ಶುಭಮನ್ ಗಿಲ್ 722 ರನ್ ಹಾಗೂ ಸಾಯಿ ಸುದರ್ಶನ್ 710 ರನ್ ಗಳಿಸಿದ್ದರು. ಆದರೆ ಫೈನಲ್‌ನಲ್ಲಿ ಆರ್‌ಸಿಬಿ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ಸಿಲುಕಿ ಗಿಲ್ 10 ರನ್ ಹಾಗೂ ಸುದರ್ಶನ್ ಕೇವಲ 12 ರನ್‌ಗಳಿಗೆ ವಿಕೆಟ್ ಒಪ್ಪಿಸಿದಾಗ ಸೂರ್ಯವಂಶಿಯ ಅಗ್ರಸ್ಥಾನ ಭದ್ರವಾಯಿತು. ವಿಶೇಷವೆಂದರೆ, ಈ ಅಂತಿಮ ಪಂದ್ಯವನ್ನು ವೀಕ್ಷಿಸಲು ಯುವ ತಾರೆ ವೈಭವ್ ಸ್ವತಃ ಐಸಿಸಿ ಅಧ್ಯಕ್ಷ ಜಯ್ ಶಾ ಅವರೊಂದಿಗೆ ಅಹಮದಾಬಾದ್ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು.
ಸಿಕ್ಸರ್‌ಗಳ ಸುರಿಮಳೆ ಹಾಗೂ ಹಲವು ಮೈಲಿಗಲ್ಲುಗಳು
ರನ್ ಗಳಿಸುವುದರ ಜೊತೆಗೆ ಈ ಆವೃತ್ತಿಯಲ್ಲಿ ಸೂರ್ಯವಂಶಿ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಒಂದೇ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನು ಮುರಿದಿರುವ ಅವರು, ಟೂರ್ನಿಯಲ್ಲಿ ಒಟ್ಟು 72 ಬಾರಿ ಚೆಂಡನ್ನು ಗ್ಯಾಲರಿಗೆ ಅಟ್ಟಿದ್ದಾರೆ. ಅಲ್ಲದೆ, ಯಾವುದೇ ಟಿ20 ಟೂರ್ನಿಯ ಪವರ್‌ಪ್ಲೇ ಹಂತದಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಇದರೊಂದಿಗೆ ಐಪಿಎಲ್‌ನಲ್ಲಿ ಅತಿ ವೇಗವಾಗಿ 1000 ರನ್ ಪೂರೈಸಿದ ಬ್ಯಾಟರ್ ಎಂಬ ಹೆಮ್ಮೆಯ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಗೆಲುವಿನ ಸಿಕ್ಸರ್, ಅನುಷ್ಕಾಗೆ ಫ್ಲೈಯಿಂಗ್ ಕಿಸ್ : ಗಮನ ಸೆಳೆದ ಕಿಂಗ್ ಕೊಹ್ಲಿ!



















