ಧರ್ಮಶಾಲಾ : ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (HPCA) ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ರಣಕೇಕೆ ಮೊಳಗಿದೆ. ಹದಿನೆಂಟು ವರ್ಷಗಳ ಕಾಲ ಐಪಿಎಲ್ ಟ್ರೋಫಿಗಾಗಿ ಕಾಯುತ್ತಿದ್ದ ಆರ್‌ಸಿಬಿ, ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ಸೃಷ್ಟಿಸಿತ್ತು. ಇದೀಗ ಅದೇ ಪ್ರದರ್ಶನವನ್ನು ಮುಂದುವರಿಸಿರುವ ರಜತ್ ಪಾಟೀದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 92 ರನ್‌ಗಳ ಬೃಹತ್ ಗೆಲುವು ದಾಖಲಿಸಿ, ಸತತ ಎರಡನೇ ಬಾರಿಗೆ ಫೈನಲ್‌ಗೆ ನೇರ ಪ್ರವೇಶ ಪಡೆದುಕೊಂಡಿದೆ.
ಟಾಸ್ ಸೋತರೂ ತಗ್ಗದ ಹುಮ್ಮಸ್ಸು
ಚೇಸಿಂಗ್‌ಗೆ ಹೆಚ್ಚು ನೆರವಾಗುತ್ತಿದ್ದ ಪಿಚ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದರೂ ಆರ್‌ಸಿಬಿ ಪಡೆಯ ಹುಮ್ಮಸ್ಸು ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಫಿಲ್ ಸಾಲ್ಟ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ವೆಂಕಟೇಶ್ ಅಯ್ಯರ್ ಆರಂಭದಿಂದಲೇ ಸ್ಫೋಟಕ ಆಟಕ್ಕೆ ಮುಂದಾದರು. ಕೇವಲ ಏಳು ಎಸೆತಗಳಲ್ಲಿ 19 ರನ್ ಸಿಡಿಸುವ ಮೂಲಕ ಗುಜರಾತ್ ಟೈಟನ್ಸ್ ಬೌಲರ್‌ಗಳಾದ ಕಗಿಸೊ ರಬಾಡ ಹಾಗೂ ಮೊಹಮ್ಮದ್ ಸಿರಾಜ್ ಅವರ ಮೇಲೆ ಒತ್ತಡ ಹೇರಿದರು. ಅಯ್ಯರ್ ವಿಕೆಟ್ ಪತನದ ನಂತರ ಕ್ರೀಸ್‌ಗೆ ಬಂದ ದೇವದತ್ ಪಡಿಕ್ಕಲ್ (18 ಎಸೆತಗಳಲ್ಲಿ 30 ರನ್), ವಿರಾಟ್ ಕೊಹ್ಲಿ (43 ರನ್) ಜೊತೆಗೂಡಿ ಇನ್ನಿಂಗ್ಸ್‌ಗೆ ವೇಗ ಒದಗಿಸಿದರು. ಇವರಿಬ್ಬರ ಅಮೋಘ ಬ್ಯಾಟಿಂಗ್ ನೆರವಿನಿಂದ ತಂಡವು ಪವರ್‌ಪ್ಲೇ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 76 ರನ್ ಕಲೆಹಾಕಿತು.
ಮರಳಿ ಹಿಡಿತ ಸಾಧಿಸಲು ಯತ್ನಿಸಿದ ಗುಜರಾತ್
ಪವರ್‌ಪ್ಲೇ ನಂತರ ಗುಜರಾತ್ ಟೈಟನ್ಸ್ ಕಮ್‌ಬ್ಯಾಕ್ ಮಾಡಲು ಯತ್ನಿಸಿತು. ರಶೀದ್ ಖಾನ್ ತಮ್ಮ ಶಿಸ್ತುಬದ್ಧ ಬೌಲಿಂಗ್‌ನಿಂದ ರನ್ ವೇಗಕ್ಕೆ ಬ್ರೇಕ್ ಹಾಕಿದರೆ, ಜೇಸನ್ ಹೋಲ್ಡರ್ ಒಂದೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅವರ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಆರ್‌ಸಿಬಿಗೆ ಆಘಾತ ನೀಡಿದರು. ಇನ್ನಿಂಗ್ಸ್‌ನ ಅರ್ಧದಷ್ಟರಲ್ಲಿ ಆರ್‌ಸಿಬಿ 3 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿತ್ತು. 14 ಓವರ್‌ಗಳ ಅಂತ್ಯಕ್ಕೆ 140 ರನ್ ಕಲೆಹಾಕಿದ್ದ ತಂಡಕ್ಕೆ ಬೃಹತ್ ಮೊತ್ತದತ್ತ ಕೊಂಡೊಯ್ಯಲು ಓವರ್‌ವೊಂದಕ್ಕೆ ಸರಾಸರಿ 15 ರನ್‌ಗಳ ಅಗತ್ಯವಿತ್ತು. ನಾಯಕ ಶುಭಮನ್ ಗಿಲ್ ತಮ್ಮ ಬೌಲಿಂಗ್ ಬದಲಾವಣೆಯ ಮೂಲಕ ನಿಯಂತ್ರಣ ಸಾಧಿಸುವ ತಂತ್ರ ರೂಪಿಸಿದರು.
33 ಎಸೆತಗಳಲ್ಲಿ 93 ರನ್ ಸಿಡಿಸಿ ಬೃಹತ್ ಮೊತ್ತದ ರೂವಾರಿ
15ನೇ ಓವರ್‌ನಿಂದ ಪಂದ್ಯದ ಚಿತ್ರಣ ಸಂಪೂರ್ಣವಾಗಿ ಬದಲಾಯಿತು. ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಹಾಗೂ ಕೃಣಾಲ್ ಪಾಂಡ್ಯ (43 ರನ್) ಗುಜರಾತ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಲು ಆರಂಭಿಸಿದರು. ಕುಲ್ವಂತ್ ಖೆಜ್ರೋಲಿಯಾ ಅವರ ಒಂದೇ ಓವರ್‌ನಲ್ಲಿ 28 ರನ್ ಚಚ್ಚಿದ ಈ ಜೋಡಿ, ರಶೀದ್ ಖಾನ್ ಅವರ ಮುಂದಿನ ಓವರ್‌ನಲ್ಲಿ 21 ರನ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿತು. ಆರಂಭದಲ್ಲಿ 10 ಎಸೆತಗಳಲ್ಲಿ 14 ರನ್ ಗಳಿಸಿ ಎಚ್ಚರಿಕೆಯ ಆಟವಾಡುತ್ತಿದ್ದ ಪಾಟೀದಾರ್, ನಂತರ ಸುಂಟರಗಾಳಿಯಂತೆ ಅಬ್ಬರಿಸಿದರು. 9 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ ಕೇವಲ 33 ಎಸೆತಗಳಲ್ಲಿ 93 ರನ್ ಚಚ್ಚಿದ ಪಾಟೀದಾರ್, ಆರ್‌ಸಿಬಿ ಮೊತ್ತವನ್ನು 20 ಓವರ್‌ಗಳಲ್ಲಿ 254 ರನ್‌ಗಳ ಐತಿಹಾಸಿಕ ಗಡಿಗೆ ತಲುಪಿಸಿದರು. ಇದು ಐಪಿಎಲ್ ಪ್ಲೇ-ಆಫ್ ಇತಿಹಾಸದಲ್ಲೇ ದಾಖಲಾದ ಅತ್ಯಧಿಕ ಮೊತ್ತವಾಗಿದೆ.
ಭುವನೇಶ್ವರ್ ಕುಮಾರ್ ಮಾರಕ ದಾಳಿ; ಗುಜರಾತ್ ಟೈಟನ್ಸ್ ಧೂಳೀಪಟ
255 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್, ಆರ್‌ಸಿಬಿ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಮುಂದೆ ಪೆವಿಲಿಯನ್ ಪರೇಡ್ ನಡೆಸಿತು. ಭುವನೇಶ್ವರ್ ಕುಮಾರ್ ನೇತೃತ್ವದ ಆರ್‌ಸಿಬಿ ಬೌಲಿಂಗ್ ಪಡೆಯು ಎದುರಾಳಿಗಳಿಗೆ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಅಂತಿಮವಾಗಿ 92 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದ ಬೆಂಗಳೂರು ಪಡೆ, ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಬಳಿಕ ಪ್ರಶಸ್ತಿ ಉಳಿಸಿಕೊಳ್ಳುವ ಅವಕಾಶ ಹೊಂದಿರುವ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಸಜ್ಜಾಗಿದೆ. ಈ ಅಮೋಘ ಗೆಲುವಿನೊಂದಿಗೆ ಆರ್‌ಸಿಬಿ ನೇರವಾಗಿ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿದೆ.
ಇದನ್ನೂ ಓದಿ : KKR ಕಳಪೆ ಪ್ರದರ್ಶನದ ನಡುವೆಯೂ ತಮ್ಮ ನಾಯಕತ್ವ ಸಮರ್ಥಿಸಿಕೊಂಡ ರಹಾನೆ!



















