ಬೆಂಗಳೂರು : ಕರ್ನಾಟಕ ಕಾಂಗ್ರೆಸ್‌ನಲ್ಲಿ ಕಳೆದ ಕೆಲವು ದಿನಗಳಿಂದ ತಾರಕಕ್ಕೇರಿದ್ದ ಸಿಎಂ ಕುರ್ಚಿ ಬದಲಾವಣೆಯ ಕದನಕ್ಕೆ ಕೊನೆಗೂ ದೆಹಲಿ ದರ್ಬಾರ್‌ನಲ್ಲಿ ತೆರೆ ಬಿದ್ದಿದೆ. ರಾಷ್ಟ್ರ ರಾಜಧಾನಿಯಲ್ಲಿ ಎಐಸಿಸಿ ಕಚೇರಿಯಲ್ಲಿ ನಡೆದ ಸತತ 7 ಗಂಟೆಗಳ ಮ್ಯಾರಥಾನ್ ಸಭೆ ಹಾಗೂ ರಾಹುಲ್ ಗಾಂಧಿ ಅವರೊಂದಿಗಿನ ಮಹತ್ವದ ‘ಒನ್-ಟು-ಒನ್’ ರಹಸ್ಯ ಚರ್ಚೆಯ ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ತ್ಯಾಗ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ದೆಹಲಿಯಿಂದ ರಾಜಧಾನಿಗೆ ಮರಳಿರುವ ಸಿಎಂ ಸಿದ್ದರಾಮಯ್ಯ ಅವರ ನಡೆ ಹಾಗೂ ರಾಜ್ಯ ರಾಜಕೀಯ ವಲಯದಲ್ಲಿನ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ. ದೆಹಲಿಯಿಂದ ನಿನ್ನೆ ವಿಶೇಷ ವಿಮಾನದಲ್ಲಿ ವಾಪಸ್ ಆದ ಬೆನ್ನಲ್ಲೇ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ತಡರಾತ್ರಿ ಸಣ್ಣ ಸಭೆ ನಡೆದಿದೆ.
ಹೈಕಮಾಂಡ್ ನಾಯಕರ ಜೊತೆ ದೆಹಲಿಯಲ್ಲಿ ನಡೆದ ಮಾತುಕತೆ ಹಾಗೂ ಅಲ್ಲಿನ ಪ್ರಮುಖ ಬೆಳವಣಿಗೆಗಳ ಕುರಿತು ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಸಿಎಂ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಆಪ್ತ ವಲಯದಲ್ಲಿ ಆತಂಕ ಮನೆಮಾಡಿದ್ದು, ತಮ್ಮ ಮುಂದಿನ ರಾಜಕೀಯ ಭವಿಷ್ಯ ಹಾಗೂ ಮುಂದಿನ ಕಾನೂನಾತ್ಮಕ ಅಥವಾ ರಾಜಕೀಯ ನಡೆಗಳ ಕುರಿತು ಚರ್ಚಿಸಲು ಇಂದು ಕೂಡ ಆಪ್ತ ಸಚಿವರಿಗೆ ಬರುವಂತೆ ಸಿಎಂ ಸೂಚನೆ ನೀಡಿದ್ದಾರೆ. ಹೀಗಾಗಿ ಇಂದಿನ ಸಭೆಯೂ ತೀವ್ರ ಮಹತ್ವ ಪಡೆದುಕೊಂಡಿದೆ.
ಈ ಎಲ್ಲಾ ರಾಜಕೀಯ ಬಿಕ್ಕಟ್ಟಿನ ನಡುವೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡು ಅಧಿಕೃತ ಕಾರ್ಯಕ್ರಮಗಳು ನಿಗದಿಯಾಗಿವೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿ ಹಾಗೂ ವಿಧಾನಸೌಧದಲ್ಲಿರುವ ನೆಹರು ಪ್ರತಿಮೆಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳು ನಿಗದಿಯಾಗಿವೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರಾ ಅಥವಾ ಮುಂದಿನ ರಾಜಕೀಯ ನಡೆಗಳ ಕುರಿತ ಸಭೆಗಳಲ್ಲೇ ನಿರತರಾಗಲಿದ್ದಾರಾ ಎನ್ನುವುದು ಸದ್ಯದ ಕುತೂಹಲ.
ಇದನ್ನೂ ಓದಿ : ಮನೆ, ಜ್ಯುವೆಲ್ಲರಿ ಶಾಪ್‌ಗೆ ಕನ್ನ ಹಾಕ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ!



















