ಬಾಗಲಕೋಟೆ : ಹುಚ್ಚು ನಾಯಿ ಕಚ್ಚಿದ ಬಳಿಕ ರೇಬಿಸ್ ನಿರೋಧಕ ಲಸಿಕೆ ಹಾಕಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಯುವಕನೊಬ್ಬ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಗೋಲಸಂಗಿ ಗ್ರಾಮದ ನಿವಾಸಿ ಪ್ರದೀಪ್ ಚಂದ್ರಶೇಖರ ಹಳೇರೊಳ್ಳಿ (22) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಕಳೆದ ಮಾರ್ಚ್ ತಿಂಗಳಲ್ಲಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮದಲ್ಲಿ ನಡೆದಿದ್ದ ‘ಮನ್ನಿಕೇರಿ ಚಂದ್ರಾದೇವಿ ಜಾತ್ರೆ’ಗೆ ಪ್ರದೀಪ್ ತೆರಳಿದ್ದನು. ಈ ಸಂದರ್ಭದಲ್ಲಿ ಆತನಿಗೆ ಹುಚ್ಚು ನಾಯಿಯೊಂದು ಕಚ್ಚಿತ್ತು. ಆದರೆ, ಪ್ರದೀಪ್ ಇದನ್ನು ಗಂಭೀರವಾಗಿ ಪರಿಗಣಿಸದೆ, ಆಸ್ಪತ್ರೆಗೆ ತೆರಳಿ ಸೂಕ್ತವಾದ ಲಸಿಕೆಗಳನ್ನು ಹಾಕಿಸಿಕೊಳ್ಳದೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದನು ಎನ್ನಲಾಗಿದೆ.
ನಾಯಿ ಕಚ್ಚಿದ ಎರಡು ತಿಂಗಳ ಬಳಿಕ, ಅಂದರೆ ಒಂದು ವಾರದ ಹಿಂದೆ ಪ್ರದೀಪ್ ದೇಹದಲ್ಲಿ ರೇಬಿಸ್ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ತಕ್ಷಣ ಆತನನ್ನು ನಿಡಗುಂದಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಪರಿಸ್ಥಿತಿ ಬಿಗಡಾಯಿಸಿದ ಕಾರಣ ಬಾಗಲಕೋಟೆಯ ಕೆರೂಡಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿಂದ ನಿನ್ನೆ (ಮೇ 25) ಮಧ್ಯಾಹ್ನ 12 ಗಂಟೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ರೇಬಿಸ್ ವೈರಸ್ ಇಡೀ ದೇಹವನ್ನು ಆವರಿಸಿತ್ತು. ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಪ್ರದೀಪ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.
ಇದನ್ನೂ ಓದಿ : ಕ್ಷುಲ್ಲಕ ಕಾರಣಕ್ಕೆ ತಾಳ್ಮೆ ಕಳೆದುಕೊಂಡ ಟ್ರಾಫಿಕ್ ಪೊಲೀಸ್ – ಆಟೋ ಚಾಲಕನಿಗೆ ಕಪಾಳಮೋಕ್ಷ!



















