ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಸಂಘರ್ಷ ನಡೆಯುತ್ತಿರುವ ಕಾರಣ ಭಾರತದಲ್ಲಿ ಪೆಟ್ರೋಲ್, ಡೀಸೆಲ್, ಸಿಎನ್ ಜಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಕಳೆದ 2 ವಾರಗಳಲ್ಲಿಯೇ ನಾಲ್ಕು ಬಾರಿ ಬೆಲೆಯೇರಿಕೆ ಮಾಡಿರುವುದು ಜನರಿಗೆ ನುಂಗಲಾರದ ತುತ್ತಾಗಿದೆ. ಇದರ ಮಧ್ಯೆಯೇ, ಚಿನ್ನ ಖರೀದಿಸುವವರಿಗೆ ಮಂಗಳವಾರ (ಮೇ 26) ಶುಭ ದಿನವಾಗಿದೆ. ಬೆಂಗಳೂರಿನಲ್ಲಿ ಮಂಗಳವಾರ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.
24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 49 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯು 15,889 ರೂಪಾಯಿ ಆಗಿದೆ. ಇದೇ ರೀತಿ, 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 45 ರೂಪಾಯಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 14,465 ರೂಪಾಯಿ ಪಾವತಿಸಬೇಕಿದೆ.
ಸೋಮವಾರ ಅಂದರೆ, ಮೇ 25ರಂದು ಚಿನ್ನ ಬೆಲೆಯಲ್ಲಿ ಏರಿಕೆಯಾಗಿತ್ತು. ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.6ರಿಂದ ಶೇ.12ಕ್ಕೆ ಏರಿಕೆ ಮಾಡಿರುವ ಕಾರಣ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಇದೇ ಬೆಲೆಯೇರಿಕೆ ಮುಂದುವರಿಯುತ್ತದೆ ಎಂಬ ಭೀತಿ ಜನರನ್ನು ಕಾಡುತ್ತಿತ್ತು. ಇದೆಲ್ಲದರ ಮಧ್ಯೆಯೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದು ಗ್ರಾಹಕರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಸ್ಥಿರತೆ ಕಾಯ್ದುಕೊಂಡ ಬೆಳ್ಳಿ ಬೆಲೆ
ಮಂಗಳವಾರ ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಇದರೊಂದಿಗೆ ಕಳೆದ 5 ದಿನಗಳಿಂದಲೂ ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬೆಂಗಳೂರಿನಲ್ಲಿ ಇಂದು ಒಂದು ಕೆ.ಜಿ ಬೆಳ್ಳಿಯ ಬೆಲೆಯು 2.85 ಲಕ್ಷ ರೂಪಾಯಿ ಆಗಿದೆ. ಮೇ 22ರಿಂದ ಇದುವರೆಗೆ ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಾಗಾಗಿ, ಬೆಳ್ಳಿ ಖರೀದಿಸುವವರಿಗೆ ಹೆಚ್ಚಿನ ಹೊರೆಯಾಗಿಲ್ಲ.
ಇದನ್ನೂ ಓದಿ : ಕೇಂದ್ರ ಸರ್ಕಾರದ JNCASR ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ : 50 ಸಾವಿರ ರೂ. ಸ್ಯಾಲರಿ



















