ಲಕ್ನೋ : ಇಂದಿನ ದಿನಗಳಲ್ಲಿ ಉದ್ಯೋಗದ ಹುಡುಕಾಟದಲ್ಲಿ ಯುವಕರು ಹಳ್ಳಿಗಳನ್ನು ಬಿಟ್ಟು ನಗರಗಳತ್ತ ಮುಖ ಮಾಡುತ್ತಿದ್ದರೆ, ಉತ್ತರ ಪ್ರದೇಶದ ಯುವಕನೊಬ್ಬ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಸಾಧಿಸಿ ತೋರಿಸಿದ್ದಾನೆ. ಐಟಿಐ ಶಿಕ್ಷಣ ಮುಗಿದರೂ ನೌಕರಿಯ ಬೆನ್ನುಬೀಳದೆ, ಸ್ವಗ್ರಾಮಕ್ಕೆ ಮರಳಿ ಸಾವಯವ ಕೃಷಿ ಆರಂಭಿಸಿದ ಯುವಕನೊಬ್ಬ ಕೇವಲ 23 ದಿನಗಳ ಅವಧಿಯಲ್ಲಿ ಬರೋಬ್ಬರಿ 1.5 ಲಕ್ಷ ರೂ. ಆದಾಯ ಗಳಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಉತ್ತರ ಪ್ರದೇಶದ ಮೌ ಜಿಲ್ಲೆಯ ನಿವಾಸಿಯಾದ ಅಖಿಲೇಶ್ ಮೌರ್ಯ ಅವರೇ ಈ ಯಶೋಗಾಥೆಯ ನಾಯಕ.
ಸಾಂಪ್ರದಾಯಿಕ ಉದ್ಯೋಗ ನಿರಾಕರಿಸಿ ಕೃಷಿಯತ್ತ ಒಲವು
ಅಖಿಲೇಶ್ ಮೌರ್ಯ ಅವರು ತಮ್ಮ ಪದವಿ ಮತ್ತು ಐಟಿಐ ಶಿಕ್ಷಣವನ್ನು ಮುಗಿಸಿದ ನಂತರ ಸಾಮಾನ್ಯ ನೌಕರಿಗೆ ಸೇರಲು ಇಷ್ಟಪಡಲಿಲ್ಲ. ತಮ್ಮ ತಂದೆ ಕೃಷಿ ಮಾಡುವುದನ್ನು ಬಾಲ್ಯದಿಂದಲೇ ಸೂಕ್ಷ್ಮವಾಗಿ ಗಮನಿಸಿದ್ದ ಅಖಿಲೇಶ್‌ಗೆ ಕೃಷಿ ಕ್ಷೇತ್ರದಲ್ಲಿ ಏನಾದರೂ ಹೊಸತು ಮಾಡಬೇಕೆಂಬ ಹಂಬಲವಿತ್ತು. ಹೀಗಾಗಿ ಸ್ವಗ್ರಾಮಕ್ಕೆ ಮರಳಿದ ಅವರು, ಸ್ಥಳೀಯ ತೋಟಗಾರಿಕೆ ಅಧಿಕಾರಿಯೊಬ್ಬರ ಮಾರ್ಗದರ್ಶನ ಪಡೆದರು. ಸಾಂಪ್ರದಾಯಿಕ ಬೆಳೆಗಳ ಬದಲಾಗಿ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಯುವಂತೆ ಅಧಿಕಾರಿ ನೀಡಿದ ಸಲಹೆ ಅಖಿಲೇಶ್ ಅವರ ಬದುಕನ್ನೇ ಬದಲಾಯಿಸಿತು. ಪ್ರಸ್ತುತ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಸಂಪೂರ್ಣ ಸಾವಯವ ಮಾದರಿಯಲ್ಲಿ ಸೌತೆಕಾಯಿ ಕೃಷಿ ಕೈಗೊಂಡಿದ್ದಾರೆ.
ಕೇವಲ 30 ಸಾವಿರ ಹೂಡಿಕೆ, ಕೈತುಂಬಾ ಆದಾಯ
ಅಖಿಲೇಶ್ ಅವರು ಕಳೆದ ಮಾರ್ಚ್ ತಿಂಗಳಿನಲ್ಲಿ ತಮ್ಮ ಒಂದು ಎಕರೆ ಜಮೀನಿನಲ್ಲಿ ಸುಧಾರಿತ ತಂತ್ರಜ್ಞಾನವಾದ ‘ರೇಸ್ಡ್ ಬೆಡ್’ (ಎತ್ತರಿಸಿದ ಮಡಿಗಳು) ಪದ್ಧತಿ ಮತ್ತು ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ಸೌತೆಕಾಯಿ ಸಸಿಗಳನ್ನು ನೆಟ್ಟಿದ್ದರು. ಇದಕ್ಕಾಗಿ ಅವರು ಸಿಂಜೆಂಟಾ, ಕ್ಲಾಸಸ್ ಅರ್ನೋ ಮತ್ತು ದೆಹಲಿಯ ಎಸ್‌ಐಆರ್ ತಳಿಗಳ ಸೌತೆಕಾಯಿಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಒಟ್ಟಾರೆ ಕೃಷಿ ಭೂಮಿಯ ಸಿದ್ಧತೆ ಮತ್ತು ನೀರಾವರಿ ವ್ಯವಸ್ಥೆಗಾಗಿ ಅವರು ಹೂಡಿಕೆ ಮಾಡಿದ್ದು ಕೇವಲ 30,000 ರೂ.ಗಳನ್ನು ಮಾತ್ರ. ಮೇ ತಿಂಗಳ ಆರಂಭದಿಂದ ಸೌತೆಕಾಯಿ ಕೊಯ್ಲು ಆರಂಭವಾಗಿದ್ದು, ಕೇವಲ 23 ದಿನಗಳಲ್ಲಿ 1.5 ಲಕ್ಷ ರೂಪಾಯಿಗಳ ಭರ್ಜರಿ ಆದಾಯ ಇವರ ಕೈಸೇರಿದೆ.
ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ
ತಮ್ಮ ಕೃಷಿ ಕ್ಷೇತ್ರದ ಪ್ರಗತಿಯ ಬಗ್ಗೆ ಮಾತನಾಡಿರುವ ಅಖಿಲೇಶ್, ಸದ್ಯ ತೋಟದಿಂದ ಪ್ರತಿದಿನ 7 ರಿಂದ 8 ಕ್ವಿಂಟಾಲ್ ಸೌತೆಕಾಯಿಯನ್ನು ಕೊಯ್ಲು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮೇ 1 ರಿಂದ ಈವರೆಗೆ ಸುಮಾರು 10 ಟನ್ ಸೌತೆಕಾಯಿಯನ್ನು ಮಾರುಕಟ್ಟೆಗೆ ಪೂರೈಸಲಾಗಿದೆ. ಆರಂಭದಲ್ಲಿ ಮಾರುಕಟ್ಟೆಯಲ್ಲಿ ಸೌತೆಕಾಯಿಗೆ ಪ್ರತಿ ಕೆಜಿಗೆ 14 ರಿಂದ 15 ರೂ. ಬೆಲೆ ಇತ್ತು. ಆದರೆ ಪ್ರಸ್ತುತ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆ ಪ್ರತಿ ಕೆಜಿಗೆ 20 ರೂ. ದಾಟಿದೆ. ಇದು ನನ್ನ ಆದಾಯ ಹೆಚ್ಚಾಗಲು ಪ್ರಮುಖ ಕಾರಣ. ಸದ್ಯ ತೋಟದಲ್ಲಿ ಪ್ರತಿನಿತ್ಯ ಕೊಯ್ಲು ಪ್ರಕ್ರಿಯೆಗಾಗಿ 7 ರಿಂದ 8 ಜನ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗವನ್ನೂ ನೀಡಿದ್ದೇನೆ ಎಂದಿದ್ದಾರೆ.
ಗ್ರಾಮೀಣಾಭಿವೃದ್ಧಿಗೆ ಮಾದರಿಯಾದ ಯುವಕ
ಕಡಿಮೆ ಹೂಡಿಕೆಯಲ್ಲಿ ಸರಿಯಾದ ನೀರಾವರಿ ಯೋಜನೆ ಮತ್ತು ಮಾರುಕಟ್ಟೆ ಆಧಾರಿತ ತಳಿಗಳ ಆಯ್ಕೆಯಿಂದ ಕೃಷಿಯಲ್ಲಿ ದೊಡ್ಡ ಯಶಸ್ಸು ಗಳಿಸಬಹುದು ಎಂಬುದನ್ನು ಅಖಿಲೇಶ್ ನಿರೂಪಿಸಿದ್ದಾರೆ. ಇವರ ಈ ಸಾಧನೆಯು ದೇಶದ ಹತ್ತಾರು ವಿದ್ಯಾವಂತ ಯುವಕರಿಗೆ ಕೃಷಿ ಮತ್ತು ತೋಟಗಾರಿಕೆಯನ್ನು ಒಂದು ಲಾಭದಾಯಕ ಉದ್ಯೋಗವನ್ನಾಗಿ ಸ್ವೀಕರಿಸಲು ಪ್ರೇರಣೆ ನೀಡಿದೆ. ಸರ್ಕಾರದ ಕೃಷಿ ಇಲಾಖೆಗಳು ಪ್ರೋತ್ಸಾಹಿಸುತ್ತಿರುವ ಬೆಳೆ ವೈವಿಧ್ಯೀಕರಣ ಮತ್ತು ಆಧುನಿಕ ನೀರಾವರಿ ಪದ್ಧತಿಗಳನ್ನು ಯುವಕರು ಅಳವಡಿಸಿಕೊಂಡರೆ, ಹಳ್ಳಿಗಳಲ್ಲೇ ಸ್ವಾವಲಂಬಿ ಜೀವನ ನಡೆಸಬಹುದು ಎಂಬುದಕ್ಕೆ ಅಖಿಲೇಶ್ ಮೌರ್ಯ ಅವರ ಯಶೋಗಾಥೆಯೇ ಸಾಕ್ಷಿ.
ಇದನ್ನೂ ಓದಿ : ನಾಸಿಕ್ TCS ಮತಾಂತರ ಪ್ರಕರಣಕ್ಕೆ ಹೊಸ ಟ್ವಿಸ್ಟ್ : ಚಾಟಿಂಗ್‌ನಲ್ಲಿ ಪತ್ತೆಯಾಯ್ತು ‘ಹನಿಯಾ’ ರಹಸ್ಯ



















