ನವದೆಹಲಿ : ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಮಾಡೆಲ್, ನಟಿ ತ್ವಿಷಾ ಶರ್ಮಾ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದೆ. ಸಂತ್ರಸ್ತೆಯ ಕುಟುಂಬಸ್ಥರು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಳ್ಳುವ ಅಥವಾ ಹೇಳಿಕೆಗಳನ್ನು ನೀಡುವ ಬದಲಾಗಿ, ಅಧಿಕೃತವಾಗಿ ತನಿಖಾ ಸಂಸ್ಥೆಗಳ ಮುಂದೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು ಸ್ಪಷ್ಟವಾಗಿ ತಿಳಿಸಿದೆ. ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು, ಈ ಸೂಚನೆಯನ್ನು ನೀಡಿದೆ.
ತನಿಖೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರದಂತೆ ಎಚ್ಚರಿಕೆ
ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿಗಳು, ಸಂತ್ರಸ್ತೆಯ ಕುಟುಂಬದವರು ತಮ್ಮ ಬಳಿ ಇರುವ ಮಾಹಿತಿಯನ್ನು ಅಥವಾ ತಮ್ಮ ಹೇಳಿಕೆಗಳನ್ನು ತನಿಖಾಧಿಕಾರಿಗಳ ಮುಂದೆ ಮಂಡಿಸಬೇಕು. ಇದರಿಂದ ಪ್ರಸ್ತುತ ನಡೆಯುತ್ತಿರುವ ತನಿಖೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳ ಮುಂದೆ ನಿರಂತರವಾಗಿ ಹೇಳಿಕೆಗಳನ್ನು ನೀಡುವುದರಿಂದ ಚಾಲ್ತಿಯಲ್ಲಿರುವ ತನಿಖೆಯ ಮೇಲೆ ಪೂರ್ವಗ್ರಹ ಪೀಡಿತ ಅಥವಾ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಾನೂನು ಪ್ರಕ್ರಿಯೆಗೆ ಪೂರಕವಾಗಿ ನಡೆದುಕೊಳ್ಳುವಂತೆ ಪೀಠವು ಸಂತ್ರಸ್ತೆಯ ಕುಟುಂಬಕ್ಕೆ ಕಿವಿಮಾತು ಹೇಳಿದೆ. ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದ ಸಂಭಾವ್ಯ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವುದರಿಂದ ಅಥವಾ ಅದನ್ನು ಬಿತ್ತರಿಸುವುದರಿಂದ ದೂರವಿರಬೇಕು ಎಂದು ನ್ಯಾಯಾಲಯವು ಮಾಧ್ಯಮಗಳಿಗೂ ಮನವಿ ಮಾಡಿದೆ.
ನ್ಯಾಯಾಂಗದ ಮೇಲಿನ ಅಪಪ್ರಚಾರಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ
ಮೃತ ತ್ವಿಷಾ ಶರ್ಮಾ ಅವರ ಅತ್ತೆ ಗಿರಿಬಾಲಾ ಸಿಂಗ್ ಅವರು ಮಾಜಿ ಜಿಲ್ಲಾ ನ್ಯಾಯಾಧೀಶರಾಗಿದ್ದಾರೆ. ಇನ್ನು ತ್ವಿಷಾ ಪತಿ ವಕೀಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಹಾಗೂ ನ್ಯಾಯಾಂಗ ವ್ಯವಸ್ಥೆಯು ನಿಷ್ಪಕ್ಷ ತನಿಖೆಗೆ ಅಡ್ಡಿಪಡಿಸುತ್ತಿದೆ ಎಂಬ ಸಾರ್ವಜನಿಕ ನಿರೂಪಣೆ (Narrative) ಸೃಷ್ಟಿಯಾಗುತ್ತಿರುವುದಕ್ಕೆ ಮುಖ್ಯ ನ್ಯಾಯಮೂರ್ತಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ಈ ಪ್ರಕರಣದ ಸುತ್ತ ಸೃಷ್ಟಿಸಲಾಗುತ್ತಿರುವ ಇಂತಹ ನಕಾರಾತ್ಮಕ ನಿರೂಪಣೆಯನ್ನು ನಾವು ಒಪ್ಪುವುದಿಲ್ಲ. ನಾವು ರಾಜ್ಯ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಂಬುತ್ತೇವೆ. ಆದಾಗ್ಯೂ, ಈ ಅನುಮಾನಗಳಿಗೆ ತೆರೆ ಎಳೆಯಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತ” ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ಯಾವುದೇ ದುರದೃಷ್ಟಕರ ಘಟನೆ ನಡೆದಿದ್ದರೂ, ಅಲ್ಲಿ ನ್ಯಾಯಸಮ್ಮತ ಮತ್ತು ನಿಷ್ಪಕ್ಷ ತನಿಖೆ ನಡೆಯುವುದನ್ನು ಖಚಿತಪಡಿಸುವುದು ನಮ್ಮ ಜವಾಬ್ದಾರಿ ಎಂದು ಕೋರ್ಟ್ ಹೇಳಿದೆ.
ಶೀಘ್ರದಲ್ಲೇ ಸಿಬಿಐ ಹೆಗಲಿಗೆ ತನಿಖೆಯ ಜವಾಬ್ದಾರಿ
ತ್ವಿಷಾ ಶರ್ಮಾ ಅವರದ್ದು ದುರದೃಷ್ಟಕರ ಮತ್ತು ಅಸ್ವಾಭಾವಿಕ ಸಾವು ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್‌ಗೆ ಮಧ್ಯಪ್ರದೇಶ ಸರ್ಕಾರವು ಈಗಾಗಲೇ ಈ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಲು ಶಿಫಾರಸು ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಚಾರಣೆಯ ಸಂದರ್ಭದಲ್ಲಿ ಹಾಜರಿದ್ದ ಸಾಲಿಸಿಟರ್ ಜನರಲ್ ಅವರು, ಸಿಬಿಐ ತನಿಖೆಗೆ ಸಂಬಂಧಿಸಿದಂತೆ ಕೇವಲ ಔಪಚಾರಿಕ ಒಪ್ಪಿಗೆಯನ್ನು ಪಡೆಯುವ ಪ್ರಕ್ರಿಯೆಯಷ್ಟೇ ಬಾಕಿ ಉಳಿದಿದೆ ಎಂದು ಕೋರ್ಟ್‌ಗೆ ತಿಳಿಸಿದರು. ಈ ಒಪ್ಪಿಗೆಯ ಪ್ರಕ್ರಿಯೆಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಕ್ಷಣವೇ ಮಾತುಕತೆ ನಡೆಸಲಾಗುವುದು ಮತ್ತು ಸಿಬಿಐ ಅಧಿಕೃತವಾಗಿ ತನಿಖೆಯನ್ನು ವಹಿಸಿಕೊಳ್ಳುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪೀಠಕ್ಕೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಅವರಿನ್ನೂ ಪಾಠ ಕಲಿತಿಲ್ಲ ಅನ್ನೋದು ವಿಷಾದನೀಯ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಆಕ್ರೋಶ!



















