ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಅಳ್ವೆಕೋಡಿ ಕಡಲತೀರ ಪ್ರದೇಶದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
11 ಜನರ ಪೈಕಿ ನಿನ್ನೆ 10 ಜನರ ಮೃತದೇಹಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಇಂದು ಪತ್ತೆಯಾಗಿದೆ. ಎನ್‌ಡಿಆರ್‌ಎಫ್, ಈಶ್ವರ ಮಲ್ಪೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹವನ್ನು ಪತ್ತೆ ಮಾಡಿ ಹೊರತೆಗೆಯಲಾಗಿದೆ. ಆ ಮೂಲಕ ನೀರಿನ ಅಬ್ಬರಕ್ಕೆ 11 ಮಂದಿ ಜಲ ಸಮಾಧಿಯಾಗಿದ್ದರೆ, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.
ಮಕ್ಕಳು ಅನಾಥ
ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ನೀರುಪಾಲದವರ ಪೈಕಿ ಒಂದೊಂದು ಕುಟುಂಬಗಳ ಕಥೆಯೂ ಮನಕಲಕುವಂತಿದೆ. ಅವಘಡದಲ್ಲಿ ಮಾದೇವ ನಾಯ್ಕ್ ಮತ್ತು ಲಕ್ಷ್ಮಿ ನಾಯ್ಕ್ ದಂಪತಿ ಅಸುನೀಗಿದ್ದು, ತಂದೆ ತಾಯಿ ಇಬ್ಬರೂ ನೀರುಪಾಲಾದ ಹಿನ್ನೆಲೆ ಮಕ್ಕಳಾದ ದರ್ಶನ (23), ಕಿರ್ತನಾ(20) ಈಗ ಅನಾಥರಾಗಿದ್ದಾರೆ. ಮತ್ತೊಂದೆಡೆ ಅವಘಡದಲ್ಲಿ ಮೃತ ಲಕ್ಷ್ಮೀ ಶಿವರಾಮ ನಾಯ್ಕ್ ಅವರ ಪತಿ ಕೂಡ 10 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಓದುತ್ತಿದ್ದ ನಾಲ್ವರು ಮಕ್ಕಳಿಗೆ ಅಮ್ಮನೇ ಅಧಾರವಾಗಿದ್ದರು. ಆದರೀಗ ಆಕೆಯೂ ಮೃತಪಟ್ಟಿರೋದು ಮಕ್ಕಳಿಗೆ ದಿಕ್ಕು ತೋಚದಂತೆ ಮಾಡಿದೆ.
ಪ್ರಧಾನಿ ಪರಿಹಾರ ಘೋಷಣೆ
ಭೀಕರ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ(PMNRF)ಯಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗಾಯಾಳುಗಳಿಗೆ ತಲಾ 50 ಸಾವಿರ ರೂ. ನೆರವು ನೀಡಲಾಗುವುದು ಎಂದೂ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಕರ್ನಾಟಕದ ಕಾರವಾರ ಜಿಲ್ಲೆಯಲ್ಲಿ ನಡೆದ ಘಟನೆಯನ್ನು ಕೇಳಿ ತೀವ್ರ ನೋವುಂಟಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ” ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ : ಭಟ್ಕಳದಲ್ಲಿ ಮುರಿನಕಟ್ಟೆ ಧ್ವಂಸ ಬೆನ್ನಲ್ಲೇ ಹೈ ಅಲರ್ಟ್ : ಇಂದಿನಿಂದ 3 ದಿನ ನಿಷೇಧಾಜ್ಞೆ ಜಾರಿ!



















