ಬೆಂಗಳೂರು: ನಿತ್ಯವೂ ಸ್ವಚ್ಛತಾ ಕೆಲಸ ಮಾಡುವವರು ತಮ್ಮ ಪಾಡಿಗೆ ಬಂದು ಕೆಲಸ ಮಾಡಿ ಹೋಗುತ್ತಾರೆ. ಯಾರೂ ಕೂಡ ಅವರನ್ನು ಗಮನಿಸುವುದಿಲ್ಲ. ಅವರಲ್ಲಿ ಮಾತನಾಡಲು ಕೂಡ ಹೋಗುವುದಿಲ್ಲ. ಅವರು ಬದುಕಿನ ಅನಿವಾರ್ಯತೆಗಾಗಿ ಆ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವ ತಾತ್ಸಾರ ಎಲ್ಲರಲ್ಲೂ ಇದ್ದರೆ ಈ ಮಹಿಳೆ ಮಾತ್ರ ಅವರ ಯೋಗ ಕ್ಷೇಮ ವಿಚಾರಿಸಿ, ಅವರಿಗಾಗಿ ಒಂದು ಕಪ್ ಚಹಾ ಜೊತೆಗೆ ಬಿಸ್ಕೆಟ್ ನೀಡಿ ಅವರ ತನು ಮನದ ದಣಿವನ್ನು ನೀಗಿಸಿ ಮತ್ತಷ್ಟು ಕೆಲಸ ಮಾಡಲು ಉತ್ಸಾಹ ತುಂಬುತ್ತಿದ್ದಾರೆ. ಇದು ಈಗ ಸಾಮಾಜಿಕ ಮಾಧ್ಯಮದಲ್ಲಿ ಬಹುದೊಡ್ಡ ಸುದ್ದಿಯಾಗಿ ವೈರಲ್ ಆಗಿದೆ.
ದಿನ ಬೆಳಗಾದರೆ ಈ ಪೌರ ಕಾರ್ಮಿಕರು ಯಾವಾಗ ಬರುತ್ತಾರೆ, ಯಾವಾಗ ಮನೆಯ ಕಸ ತೆಗೆದುಕೊಂಡು ಹೋಗುತ್ತಾರೆ ಎಂದು ಕಾಯುವವರೇ ಹೆಚ್ಚು. ಆದರೆ ಮಹಿಳೆ ಮಾತ್ರ ಅವರಿಗೆ ಕಸದ ಬದಲಿಗೆ ಬಿಸಿಬಿಸಿ ಚಹಾ ಮಾಡಿಟ್ಟು, ಕೆಲವು ಬಿಸ್ಕೆಟ್ ಗಳನ್ನು ತಟ್ಟೆಯಲ್ಲಿಟ್ಟು ಕಾಯುತ್ತಾರೆ. ಇವರ ಈ ಕಾರ್ಯ ಈಗ ಸಾಮಾಜಿಕ ಮಾಧ್ಯಮದ ಮೂಲಕ ಎಲ್ಲರ ಗಮನ ಸೆಳೆದಿದೆ.
ನಾವು ಮಾಡುವ ಸಣ್ಣದೊಂದು ಸಹಾಯ, ತೋರುವ ಕೊಂಚ ಪ್ರೀತಿ, ಕರುಣೆ ಕೂಡ ಕೆಲವೊಬ್ಬರ ಪಾಲಿಗೆ ನಮ್ಮನ್ನು ದೇವರಾಗಿ ಮಾಡುತ್ತದೆ. ನಿಸ್ವಾರ್ಥವಾಗಿ ಮಾಡುವ ಇಂತಹ ಕಾರ್ಯಗಳೇ ಮಾನವೀಯತೆಯ ಬಹುದೊಡ್ಡ ಉದಾಹರಣೆಗಳಾಗಿ ಬಿಡುತ್ತವೆ. ಹೀಗೆ ಬೆಂಗಳೂರಿನ ಮಹಿಳೆಯೊಬ್ಬರು ಮಾಡಿದ ಸಣ್ಣ ಕಾರ್ಯ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಹೃದಯವನ್ನು ಗೆದ್ದಿದೆ.
ಹಲವಾರು ವರ್ಷಗಳಿಂದ ಬೆಂಗಳೂರಿನ ಮಹಿಳೆಯೊಬ್ಬರು ಮಾಡುವ ಈ ಕೆಲಸವನ್ನು ಇನ್‌ಸ್ಟಾಗ್ರಾಮ್ ಬಳಕೆದಾರ ಜಗದೀಶ್ ನಡನಳ್ಳಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪ್ರಾಣಿ, ಪಕ್ಷಿಗಳು ಸೇರಿದಂತೆ ಎಲ್ಲರಿಗೂ ದಯೆ, ಪ್ರೀತಿಯನ್ನು ತೋರುವ ಈ ಮಹಿಳೆ ಮಾಡುತ್ತಿರುವುದು ಸಣ್ಣ ಕೆಲಸವಲ್ಲ. ಮಾನವೀಯತೆಯ ಬಹುದೊಡ್ಡ ಉದಾಹರಣೆಯಾಗಿದೆ.
ಈ ಮಹಿಳೆ ಬೆಳಗ್ಗೆ ಮನೆಯಿಂದ ಹೊರಗೆ ಬಂದು ತಮ್ಮ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಪುರಸಭೆಯ ಕಾರ್ಮಿಕರ ಬಳಿ ಹೋಗಿ ಅವರಿಗೆ ಚಹಾ ಮತ್ತು ಬಿಸ್ಕೆಟ್ ಗಳನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ಸಮವಸ್ತ್ರ ಧರಿಸಿದ ಪೌರ ಕಾರ್ಮಿಕರು, ಮಹಿಳೆಯೊಂದಿಗೆ ಪ್ರೀತಿಯಿಂದ ಮಾತನಾಡುತ್ತಾರೆ. ಅವರು ನೀಡುವ ಉಪಾಹಾರವನ್ನು ಸ್ವೀಕರಿಸುತ್ತಾರೆ. ಇದು ಮಹಿಳೆಯ ನಿತ್ಯದ ದಿನಚರಿಯ ಭಾಗವಾಗಿದೆ ಎಂದು ಜಗದೀಶ್ ತಿಳಿಸಿದ್ದಾರೆ.


















