ರಾಯಚೂರು: ಜಿಲ್ಲೆಯಾದ್ಯಂತ ಶನಿವಾರ ತಡರಾತ್ರಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಹಲವು ಭಾಗಗಳು ತತ್ತರಿಸಿದ್ದು, ಸಿಡಿಲು ಬಡಿದು ತೆಂಗಿನಮರ ಭಸ್ಮವಾಗಿರುವ ಘಟನೆ ಹಾಗೂ ಮಂತ್ರಾಲಯದಲ್ಲಿ ಭಕ್ತರು ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಪ್ರಸಂಗಗಳು ವರದಿಯಾಗಿವೆ.
ಜಿಲ್ಲೆಯ ಅರಕೇರಾ ತಾಲೂಕಿನ ಮುಕ್ಕಲಗುಡ್ಡ ತಾಂಡಾದಲ್ಲಿ ರಾತ್ರಿ ವೇಳೆ ಭೀಕರ ಸಿಡಿಲು ಬಡಿದಿದೆ. ತಾಂಡಾದ ನಿವಾಸಿ ಮನೋಹರ್ ನಾಯ್ಕ್ ಎಂಬುವರ ಮನೆ ಮುಂದೆ ಇದ್ದ ತೆಂಗಿನಮರಕ್ಕೆ ಏಕಾಏಕಿ ಸಿಡಿಲು ಬಡಿದ ಪರಿಣಾಮ, ಮರದಲ್ಲಿದ್ದ ತೆಂಗಿನಕಾಯಿಗಳು ಹಾಗೂ ಮರದ ಗರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಸಿಡಿಲು ಬಡಿದ ರಭಸಕ್ಕೆ ಮರ ಹೊತ್ತಿ ಉರಿದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಇದು ದಟ್ಟವಾದ ಜನವಸತಿ ಪ್ರದೇಶವಾಗಿದ್ದರೂ ಸಹ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸದೆ ಇಡೀ ತಾಂಡಾ ದೊಡ್ಡ ಅನಾಹುತದಿಂದ ಪಾರಾಗಿದೆ.


















