ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದ ರೈತನಿಗೆ ಭಾರೀ ನಷ್ಟ ಉಂಟಾಗಿದೆ.
ನಾಮಗೊಂಡ್ಲು ಸುತ್ತಮುತ್ತ ಸುರಿದ ಮಳೆಗೆ ಎರಡೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮ್ಯಾಟೋ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಕೆಲವೇ ದಿನಗಳಲ್ಲಿ ಕಟಾವಿಗೆ ಸಿದ್ಧವಾಗಿದ್ದ ಬೆಳೆ ಹಾಳಾಗಿರುವುದು ರೈತರಿಗೆ ದೊಡ್ಡ ಆಘಾತವಾಗಿದೆ.
ರೈತ ಮಂಜುನಾಥ್ ರೆಡ್ಡಿ ಅವರು ಸುಮಾರು 4 ಲಕ್ಷ ವೆಚ್ಚ ಮಾಡಿ ಟೊಮ್ಯಾಟೋ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ ₹50 ರಿಂದ ₹70 ಬೆಲೆ ಇದ್ದುದರಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಲಾಭದ ನಿರೀಕ್ಷೆ ಹೊಂದಿದ್ದರು.
ಇದಕ್ಕಾಗಿ ಅವರು ಸುಮಾರು 7 ಲಕ್ಷ ಸಾಲ ಮಾಡಿಕೊಂಡು ಬೆಳೆ ಬೆಳೆದಿದ್ದರು. ಆದರೆ ಬಿರುಗಾಳಿ-ಮಳೆಗೆ ಸಂಪೂರ್ಣ ಬೆಳೆ ಹಾನಿಯಾಗಿ “ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ” ಎಂಬಂತ ಸ್ಥಿತಿ ಎದುರಾಗಿದೆ. ನಷ್ಟಕ್ಕೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕೆಂದು ರೈತರು ಹಾಗೂ ಸ್ಥಳೀಯರು ಮನವಿ ಮಾಡಿದ್ದಾರೆ.


















