ಬೆಂಗಳೂರು : ಬೆಂಗಳೂರಿನ ಹೃದಯ ಭಾಗ ಮಲ್ಲೇಶ್ವರಂನಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ “ರಂಗ ರಂಗೋಲಿ” ಎಂಬ ಶ್ರೇಷ್ಠ ನಾಟಕಗಳ ಅಪರೂಪದ ಉತ್ಸವ ಇದೇ ಬರುವ ಮೇ 28ರಿಂದ ಮೇ 30ರವರೆಗೆ ನಡೆಯಲಿದ್ದು, ಪ್ರತಿದಿನ ಸಂಜೆ 6:30ಕ್ಕೆ ರಂಗಾಭಿಮಾನಿಗಳಿಗೆ ಅದ್ಭುತ ನಾಟಕದ ಅನುಭವವನ್ನು ನೀಡಲಿದೆ. ಮೂರು ದಿನಗಳ ಕಾಲ ನಡೆಯುವ ಈ ರಂಗ ರಂಗೋಲಿ ಶ್ರೇಷ್ಠ ನಾಟಕಗಳ ಉತ್ಸವವದಲ್ಲಿ ಭಿನ್ನ ವಿಭಿನ್ನ ಶೈಲಿಯ ನಾಟಕಗಳು ಪ್ರದರ್ಶನಗೊಳ್ಳಲಿದ್ದು, ಪ್ರೇಕ್ಷಕರಿಗೆ ರಂಗಸೌಂದರ್ಯದ ವಿಶಿಷ್ಟ ಅನುಭವ ನೀಡಲಿದೆ.

ಮೇ 28ರಂದು “ನಡುರಾತ್ರಿಯ ಪುಳಕ” ನಾಟಕ ಪ್ರದರ್ಶನ
ರಂಗ ರಂಗೋಲಿ ನಾಟಕ ಉತ್ಸವದ ಮೊದಲ ದಿನವಾದ ಮೇ 28ರಂದು ಸಂಜೆ 6:30ಕ್ಕೆ “ನಡುರಾತ್ರಿಯ ಪುಳಕ” ನಾಟಕ ಪ್ರದರ್ಶನಗೊಳ್ಳಲಿದೆ. ಈ ಅದ್ಭುತ ನಾಟಕದ ಅನುವಾದ ಮತ್ತು ನಿರ್ದೇಶನವನ್ನು ಖ್ಯಾತ ರಂಗಕರ್ಮಿ ಎಸ್. ಸುರೇಂದ್ರ ನಾಥ್ ಅವರು ಮಾಡಿದ್ದು, ಬೆಂಗಳೂರಿನ ಪ್ರತಿಷ್ಠಿತ ‘ಸಂಕೇತ್’ ತಂಡವು ಈ ನಾಟಕವನ್ನು ಪ್ರಸ್ತುತಪಡಿಸುತ್ತಿದೆ.
ಮೇ 29ರಂದು ಗಿರೀಶ್ ಕಾರ್ನಾಡ್ ಅವರ “ತುಘಲಕ್” ನಾಟಕ ಪ್ರದರ್ಶನ
ಮೇ 29ರಂದು ಸಂಜೆ 6:30ಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕನ್ನಡದ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ರಚಿಸಿರುವ ಐತಿಹಾಸಿಕ “ತುಘಲಕ್” ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಸಿ.ಆರ್. ಸಿಂಹ ಅವರು ನಿರ್ದೇಶನ ಮಾಡಿದ್ದು, ‘ವೇದಿಕೆ ಫೌಂಡೇಷನ್’ ತಂಡದಿಂದ ರಂಗಪ್ರದರ್ಶನ ನಡೆಯಲಿದೆ.
ಮೇ 30ರಂದು “ಗೋಕುಲ ನಿರ್ಗಮನ” ನಾಟಕ ಪ್ರದರ್ಶನ
ನಾಟಕ ಉತ್ಸವದ ಕೊನೆಯ ದಿನವಾದ ಮೇ 30ರಂದು ಸಂಜೆ 6:30ಕ್ಕೆ ಖ್ಯಾತ ರಂಗ ನಿರ್ದೇಶಕ ಬಿ.ವಿ. ಕಾರಂತರ ನಿರ್ದೇಶನದ ಜನಪ್ರಿಯ ನಾಟಕ “ಗೋಕುಲ ನಿರ್ಗಮನ” ಪ್ರದರ್ಶನಗೊಳ್ಳಲಿದೆ. ಈ ನಾಟಕದ ರಚನೆಯನ್ನು ಕನ್ನಡ ಸಾಹಿತ್ಯ ಲೋಕದ ಧೀಮಂತ ಕವಿ ಪು.ತಿ.ನ ಅವರು ಮಾಡಿದ್ದಾರೆ ಹಾಗೂ ಮರುವಿನ್ಯಾಸವನ್ನು ಡಾ. ಟಿ ಎಸ್ ನಾಗಾಭರಣ ಮಾಡಿದ್ದು, ಬೆನಕ ತಂಡ ಈ ನಾಟಕವನ್ನು ಪ್ರದರ್ಶಿಸಲಿದೆ.
ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ಲಭ್ಯ
“ರಂಗ ರಂಗೋಲಿ” ನಾಟಕೋತ್ಸವದ ಎಲ್ಲಾ ಪ್ರದರ್ಶನಗಳ ಟಿಕೆಟ್‌ಗಳು ಈಗಾಗಲೇ ಬುಕ್ ಮೈ ಶೋನಲ್ಲಿ ಲಭ್ಯವಿದ್ದು, ರಂಗಾಭಿಮಾನಿಗಳು QR ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ಟಿಕೆಟ್ ಬುಕ್ಕಿಂಗ್ ಮಾಡಬಹುದು.
ಇದನ್ನೂ ಓದಿ : ಬೈಂದೂರು ಸರ್ಕಾರಿ ಕಾಲೇಜಿನಲ್ಲಿ ನೂತನ ಸಭಾಂಗಣ ಉದ್ಘಾಟನೆ, ವಾರ್ಷಿಕೋತ್ಸವ ಸಂಭ್ರಮ!



















