ಬೆಂಗಳೂರು : ಹಿಂದಿನ ಬಿಬಿಎಂಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅಕ್ರಮ ಕಾಮಗಾರಿ ಮತ್ತು ನಕಲಿ ಬಿಲ್ ಹಗರಣ ಪ್ರಕರಣ ಇದೀಗ ಮತ್ತೆ ಚರ್ಚೆಗೆ ಬಂದಿದೆ. 2009ರಿಂದ 2014ರ ಅವಧಿಯಲ್ಲಿ ಗಾಂಧಿನಗರ, ಮಲ್ಲೇಶ್ವರ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಸಾರ್ವಜನಿಕ ಕಾಮಗಾರಿಗಳ ಹೆಸರಿನಲ್ಲಿ ಸುಮಾರು 118 ಕೋಟಿ ರೂಪಾಯಿ ಗೋಲ್ಮಾಲ್ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿಚಾರಣೆಗೆ ಒಳಪಡಬೇಕಿರುವ 310 ಇಂಜಿನಿಯರ್‌ಗಳ ಪತ್ತೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.
ಏನು ಪ್ರಕರಣ?
ಆ ಅವಧಿಯಲ್ಲಿ ಕಾಮಗಾರಿಗಳು ವಾಸ್ತವವಾಗಿ ನಡೆಯದೇ ಇದ್ದರೂ, ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ಬಿಡುಗಡೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ನಿವೃತ್ತ ನ್ಯಾಯಮೂರ್ತಿ H. N. ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿತ್ತು. ಸಮಿತಿಯು ಕೂಲಂಕುಷ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವರದಿ ಆಧರಿಸಿ ಆ ಸಮಯದಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳ ವಿರುದ್ಧ ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ.

ಯಾರಿಗೆ ನೋಟಿಸ್?
ಆ ಅವಧಿಯಲ್ಲಿ ಸಂಬಂಧಿತ ವಲಯಗಳಲ್ಲಿ ಕೆಲಸ ಮಾಡಿದ್ದ AE, AEE ಮತ್ತು EE ಹುದ್ದೆಯ ಒಟ್ಟು 310 ಇಂಜಿನಿಯರ್‌ಗಳಿಗೆ ನೋಟಿಸ್ ಜಾರಿಗೊಳಿಸಲು ಜಿಬಿಎ ಮುಂದಾಗಿದೆ. ಆದರೆ, ಅಚ್ಚರಿಯ ಸಂಗತಿಯೆಂದರೆ ಇವರ ವಿಳಾಸ ಮತ್ತು ಸೇವಾ ವಿವರಗಳೇ ಲಭ್ಯವಾಗುತ್ತಿಲ್ಲ.
‘ಇಂಜಿನಿಯರ್‌ಗಳು ಮಿಸ್ಸಿಂಗ್’
ಜಿಬಿಎ ಅಧಿಕಾರಿಗಳ ಪ್ರಕಾರ, ಆ ಕಾಲದ ಬಿಬಿಎಂಪಿ ದಾಖಲೆಯಲ್ಲಿಯೂ ಹಲವರ ಮಾಹಿತಿ ಲಭ್ಯವಿಲ್ಲ. ಕೆಲವರು ಬೇರೆ ಇಲಾಖೆಯಿಂದ ವರ್ಗಾವಣೆ ಆಗಿ ಬಂದಿದ್ದರೆ, ಕೆಲವರು ನಿವೃತ್ತರಾಗಿರುವ ಸಾಧ್ಯತೆಯಿದೆ. ಈಗ ಅವರು ಯಾವ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅಥವಾ ಎಲ್ಲಿದ್ದಾರೆ ಎಂಬ ಮಾಹಿತಿ ಕೂಡ ಸ್ಪಷ್ಟವಾಗಿಲ್ಲ. ಈ ಹಿನ್ನೆಲೆ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಜಿಬಿಎ, ಸಂಬಂಧಿತ ಇಂಜಿನಿಯರ್‌ಗಳು ವಿಚಾರಣೆಗೆ ಸಹಕರಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾನವಿ ಮಾಡಿದ್ದಾರೆ.
ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತಾನಾಡಿ, “ಇದು ಬಹಳ ಹಿಂದಿನ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ. ಸರ್ಕಾರದಿಂದ ಈಗ ಸೂಚನೆ ಬಂದಿದೆ. ಹೀಗಾಗಿ ಸಂಬಂಧಿತ ಇಂಜಿನಿಯರ್‌ಗಳ ಮಾಹಿತಿ ಕಲೆ ಹಾಕಲಾಗುತ್ತಿದೆ. ಆದರೆ, ಅವರ ವಿವರಗಳು ಪಾಲಿಕೆಯ ದಾಖಲೆಗಳಲ್ಲಿ ಲಭ್ಯವಾಗುತ್ತಿಲ್ಲ. ಕೆಲವರು ಬೇರೆ ಇಲಾಖೆಯಿಂದ ಬಂದಿದ್ದರು. ಈಗ ಅವರು ಎಲ್ಲಿದ್ದಾರೆ, ನಿವೃತ್ತರಾಗಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ವಿಚಾರಣೆಗೆ ಸಹಕರಿಸುವಂತೆ ಸಾರ್ವಜನಿಕ ಪ್ರಕಟಣೆ ನೀಡಿದ್ದೇವೆ. 15 ದಿನಗಳ ಕಾಲಾವಕಾಶ ನೀಡಿದ್ದೇವೆ. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಸದ್ಯ ಈ ಬೆಳವಣಿಗೆ ಇದೀಗ ಹಿಂದಿನ ಬಿಬಿಎಂಪಿ ಆಡಳಿತಾವಧಿಯ ಕಾಮಗಾರಿಗಳ ಪಾರದರ್ಶಕತೆ ಮತ್ತು ದಾಖಲೆ ನಿರ್ವಹಣೆ ಬಗ್ಗೆ ಸಾರ್ವಜನಿಕರಲ್ಲಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಇದನ್ನೂ ಓದಿ : Gold Price Today : ಸತತ ಮೂರನೇ ದಿನವೂ ಚಿನ್ನದ ಬೆಲೆ ಏರಿಕೆ – ಇಷ್ಟಿದೆ ಇಂದಿನ ದರ?


















