ಬೆಂಗಳೂರು : ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದು, ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೀಗ ಬೆಂಗಳೂರಲ್ಲಿ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕನನ್ನು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಜೆಪಿ ನಗರ ಸಮೀಪದ ಗೌರವ್ ನಗರದಲ್ಲಿರುವ ಬೆಸ್ಕಾಂ ಕಚೇರಿಯ ಎಇಇ ಮನೋಜ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾನೆ.
ಮನೋಜ್ ಕುಮಾರ್ ಜೊತೆ ವಿದ್ಯುತ್ ಗುತ್ತಿಗೆದಾರ ಕಂಠರಾಜು ಕೂಡ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ತಾತ್ಕಾಲಿಕವಾಗಿ ಮೀಟರ್‌ಗೆ 25 ಕಿಲೋವ್ಯಾಟ್ ವಿದ್ಯುತ್ ಪೂರೈಕೆ ಮಾಡಲು ಆರೋಪಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ದೂರುದಾರ ರಘುರಾಜ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದು, ಅದರ ಆಧಾರದಲ್ಲಿ ಕಾರ್ಯಾಚರಣೆ ನಡೆಸಿ ಒಟ್ಟು 50 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಎಇಇ ಮನೋಜ್ ಕುಮಾರ್ ಲಂಚದ ಹಣವನ್ನು ನೇರವಾಗಿ ತಾನು ಪಡೆಯದೇ, ವಿದ್ಯುತ್ ಗುತ್ತಿಗೆದಾರ ಕಂಠರಾಜುಗೆ ನೀಡುವಂತೆ ಸೂಚಿಸಿದ್ದ ಎನ್ನಲಾಗಿದೆ. ಅದರಂತೆ ದೂರುದಾರ ಇಂದು ಕಂಠರಾಜುಗೆ ಹಣ ನೀಡುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ. ಪ್ರಕರಣ ಬೆಸ್ಕಾಂ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ಮನಕಲಕುವ ಘಟನೆ – 1 ದಿನದ ಮಗುವನ್ನು ಪೊದೆಯಲ್ಲಿ ಬಿಟ್ಟು ಹೋದ ಪಾಪಿಗಳು


















