ಬೆಂಗಳೂರು : ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಐಪಿಎಲ್ 2026ರ ಟೂರ್ನಿಯಲ್ಲಿ ಅದ್ಭುತ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಮಂಗಳವಾರ, ಮೇ 19 ರಂದು ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ ಈ ಸಾಧನೆ ಮಾಡಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕೇವಲ 38 ಎಸೆತಗಳಲ್ಲಿ 93 ರನ್ ಸಿಡಿಸಿದ ಅವರು, ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ 50 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಅವರು ಬರೋಬ್ಬರಿ 10 ಭರ್ಜರಿ ಸಿಕ್ಸರ್ ಹಾಗೂ 7 ಆಕರ್ಷಕ ಬೌಂಡರಿಗಳನ್ನು ಸಿಡಿಸಿ ಕ್ರೀಡಾಭಿಮಾನಿಗಳನ್ನು ರಂಜಿಸಿದರು.
ಐಪಿಎಲ್ ಇತಿಹಾಸದಲ್ಲಿ ಒಂದೇ ಸೀಸನ್‌ನಲ್ಲಿ 50ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ಕೇವಲ ಮೂರನೇ ಬ್ಯಾಟರ್ ಎಂಬ ಕೀರ್ತಿಗೂ ವೈಭವ್ ಭಾಜನರಾಗಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್‌ನ ದೈತ್ಯ ಆಟಗಾರರಾದ ಕ್ರಿಸ್ ಗೇಲ್ (2012, 2013) ಹಾಗೂ ಆಂಡ್ರೆ ರಸೆಲ್ (2019) ಮಾತ್ರ ಈ ಸಾಧನೆ ಮಾಡಿದ್ದರು. ಪ್ರಸ್ತುತ ಆವೃತ್ತಿಯಲ್ಲಿ 13 ಪಂದ್ಯಗಳನ್ನು ಆಡಿರುವ ಸೂರ್ಯವಂಶಿ, ಒಟ್ಟು 53 ಸಿಕ್ಸರ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. 2012ರ ಐಪಿಎಲ್‌ನಲ್ಲಿ ಕ್ರಿಸ್ ಗೇಲ್ ಬಾರಿಸಿದ್ದ 59 ಸಿಕ್ಸರ್‌ಗಳೇ ಇದುವರೆಗಿನ ಸಾರ್ವಕಾಲಿಕ ದಾಖಲೆಯಾಗಿದ್ದು, ಮುಂಬರುವ ಪಂದ್ಯಗಳಲ್ಲಿ ವೈಭವ್ ಈ ದಿಗ್ಗಜನ ದಾಖಲೆಯನ್ನು ಮುರಿಯುವ ಭರವಸೆ ಮೂಡಿಸಿದ್ದಾರೆ.
ಲಕ್ನೋ ಬೌಲರ್‌ಗಳ ಬೆವರಿಳಿಸಿದ ಆಟದ ವೈಖರಿ
ಲಕ್ನೋ ತಂಡ ನೀಡಿದ್ದ 221 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ವೈಭವ್ ಸೂರ್ಯವಂಶಿ ಅವರ ಆಟದ ನೈಜ ವೈಖರಿ ಅನಾವರಣಗೊಂಡಿತು. ಆರಂಭದ 10 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಎಚ್ಚರಿಕೆಯ ಆಟವಾಡಿದ ಅವರು, ಪಿಚ್‌ನ ವೇಗ ಅರಿತ ಬಳಿಕ ತಮ್ಮ ಅಸಲಿ ಸ್ವರೂಪ ತೋರಿದರು. 244.74ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು, ಲಕ್ನೋ ವೇಗಿಗಳು ಹಾಗೂ ಸ್ಪಿನ್ನರ್‌ಗಳನ್ನು ಮನಬಂದಂತೆ ದಂಡಿಸಿದರು. ಶತಕದಂಚಿನಲ್ಲಿ ಮೋಸಿನ್ ಖಾನ್ ಅವರ ನಿಧಾನಗತಿಯ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಲಾಂಗ್-ಆನ್‌ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೂ ಅವರ ಈ ನಿರ್ಣಾಯಕ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಇನ್ನು 5 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
ಇದನ್ನೂ ಓದಿ : ಮಂಡ್ಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ


















