ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಜಂಟಿ ಕ್ರಿಯಾ ಸಮಿತಿ ಮೇ 20ರಿಂದ ಘೋಷಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸದ್ಯಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಮುಷ್ಕರ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಜಂಟಿ ಕ್ರಿಯಾ ಸಮಿತಿಯ ಪ್ರತಿನಿಧಿಗಳು, ಮುಖ್ಯಮಂತ್ರಿ, ಸಾರಿಗೆ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಿಗದಿಪಡಿಸಲು ಸರ್ಕಾರದ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆ, ಸದ್ಯ ಮುಷ್ಕರ ನಡೆಸದಂತೆ ಜಂಟಿ ಕ್ರಿಯಾ ಸಮಿತಿಗೆ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ನೌಕರರ ಬೇಡಿಕೆಗಳ ಕುರಿತು ಸರ್ಕಾರ ಗಂಭೀರವಾಗಿ ಚರ್ಚಿಸಲು ಸಿದ್ಧವಿದ್ದು, ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ಆಯೋಜಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನು ಪರಿಗಣಿಸಿದ ಹೈಕೋರ್ಟ್, ಸಂಧಾನ ಪ್ರಕ್ರಿಯೆಗೆ ಅವಕಾಶ ನೀಡುವ ಉದ್ದೇಶದಿಂದ ತಕ್ಷಣ ಮುಷ್ಕರ ಕೈಗೊಳ್ಳಬಾರದು ಎಂದು ಜಂಟಿ ಕ್ರಿಯಾ ಸಮಿತಿಗೆ ಸೂಚನೆ ನೀಡಿತು.
ಇದೇ ವೇಳೆ, ಸಾರಿಗೆ ಸೇವೆ ಸ್ಥಗಿತಗೊಂಡರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದನ್ನೂ ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು. ಸಭೆಯ ಪ್ರಗತಿ ಹಾಗೂ ಸರ್ಕಾರದ ಕ್ರಮಗಳ ಕುರಿತು ಮುಂದಿನ ವಿಚಾರಣೆಯಲ್ಲಿ ಮಾಹಿತಿ ನೀಡುವಂತೆ ಸೂಚಿಸಿ, ಪ್ರಕರಣದ ವಿಚಾರಣೆಯನ್ನು ಮುಂದೂಡಿತು. ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಮೇ 20ರಿಂದ ಆರಂಭವಾಗಬೇಕಿದ್ದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಸದ್ಯಕ್ಕೆ ಮುಂದೂಡಲ್ಪಟ್ಟಂತಾಗಿದೆ.
ಇದನ್ನೂ ಓದಿ : ಜಿಬಿಎ ಚುನಾವಣೆ ಭವಿಷ್ಯಕ್ಕೆ ನಾಳೆ ಸುಪ್ರೀಂ ಕೋರ್ಟ್ ತೀರ್ಮಾನ ನಿರ್ಣಾಯಕ!



















