ಬೆಂಗಳೂರು : ಸಂಜೆಯಾಗುತ್ತಿದ್ದಂತೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ವರುಣ ತಂಪೆರೆದಿದ್ದಾನೆ. ನಗರದ ವಿವಿಧೆಡೆ ಗುಡುಗು-ಮಿಂಚು ಸಹಿತ ಭಾರೀ ಗಾಳಿ ಮಳೆ ಸುರಿದಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿ ಸವಾರರು ಪರದಾಡುವಂತಾಗಿದೆ.
ತಮ್ಮ ತಮ್ಮ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ಮಳೆಯಿಂದ ಸಮಸ್ಯೆಗೆ ಸಿಲುಕಿದ್ದು, ರಸ್ತೆ ಬದಿಗಳಲ್ಲೇ ಬೈಕ್ ನಿಲ್ಲಿಸಿ ಬಸ್ ನಿಲ್ದಾಣಗಲ್ಲಿ, ಅಂಗಡಿ ಮುಂಗಟ್ಟುಗಳ ಎದುರು ಸವಾರರು ನಿಂತ ದೃಶ್ಯಗಳು ಕಂಡುಬಂದಿವೆ. ನಗರದ ಹಲವು ರಸ್ತೆಗಳು ಮಳೆ ನೀರಿನಿಂದ ಆವೃತವಾಗಿದ್ದು, ತಗ್ಗು ಪ್ರದೇಶದ ರಸ್ತೆಗಳು ಕೆರೆಯಂತಾಗಿವೆ.
ಹೆಬ್ಬಾಳ, ಸಂಜಯನಗರ, ಭೂಪಸಂದ್ರ, ವಸಂತನಗರ, ಸಿಟಿ ಮಾರ್ಕೆಟ್, ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಜೆ.ಪಿ. ನಗರ, ಬನಶಂಕರಿ, ಕೋಣನಕುಂಟೆ, ಯಲಹಂಕ, ಸದಾಶಿವನಗರ, ರಾಜಾಜಿನಗರ, ವಿಜಯನಗರ, ಚಂದ್ರಾಲೇಔಟ್, ಇಂದಿರಾನಗರ, ಲಗ್ಗೆರೆ, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಸುಬ್ರಮಣ್ಯ ನಗರ, ನಾಗರಬಾವಿ, ಗಿರಿನಗರ, ಬಸವನಗುಡಿ, ಮಲ್ಲೇಶ್ವರಂ, ಶೇಷಾದ್ರಿಪುರಂ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ.
ಇನ್ನು ಮಳೆ ಹಿನ್ನೆಲೆ ನೀರು ಸಂಗ್ರಹಣೆ ಸಾಧ್ಯತೆ ಇರುವ ಕಾರಣ ಮುಂಜಾಗ್ರತ ಕ್ರಮವಾಗಿ ಕೆ.ಆರ್.ಸರ್ಕಲ್ ಅಂಡರ್ ಪಾಸ್ ಬಂದ್ ಮಾಡಲಾಗಿದೆ. ಬ್ಯಾರಿಕೇಡ್ ಹಾಕುವ ಮೂಲಕ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ನೀನು ದಪ್ಪಗಿದ್ದೀಯ, ಮಗು ಆಗಲ್ಲ ಎಂದು ಗಂಡನ ಕಿರುಕುಳ ಆರೋಪ ; ಮನನೊಂದ ಪತ್ನಿ ಆತ್ಮಹತ್ಯೆ



















