ಬಳ್ಳಾರಿ : ಜಿಲ್ಲೆಯಲ್ಲಿ ಮಳೆಯ ಅಬ್ಬರದ ನಡುವೆ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಸಪೋಟ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಸಿಡಿಲು ಬಡಿದು ಮೃತಪಟ್ಟ ಘಟನೆ ಬಳ್ಳಾರಿಯ ಮೋಕಾ ಸಮೀಪದ ಡಿ.ನಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಗಾದಿಲಿಂಗಪ್ಪ (32) ಎಂದು ಗುರುತಿಸಲಾಗಿದೆ. ಸಂಜೆ ಸುಮಾರು 4 ಗಂಟೆ ಸುಮಾರಿಗೆ ಏಕಾಏಕಿ ಗುಡುಗು-ಮಿಂಚಿನೊಂದಿಗೆ ಮಳೆ ಆರಂಭವಾಗಿದ್ದು, ಇದೇ ವೇಳೆ ಸಪೋಟ ತೋಟದಲ್ಲಿ ಕೃಷಿ ಕೆಲಸ ನಿರ್ವಹಿಸುತ್ತಿದ್ದ ಗಾದಿಲಿಂಗಪ್ಪನಿಗೆ ಸಿಡಿಲು ಬಡಿದಿದೆ ಎಂದು ತಿಳಿದುಬಂದಿದೆ.
ಸಿಡಿಲು ಬಿದ್ದ ತಕ್ಷಣ ಗಾದಿಲಿಂಗಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿದ್ದವರು ತಕ್ಷಣವೇ ರಕ್ಷಣಾಕಾರ್ಯ ಆರಂಭಿಸಿದ್ದಾರೆ. ಬಳಿಕ ಗಾಯಾಳುವನ್ನು ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ವೈದ್ಯರು ನಡೆಸಿದ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಮಳೆಯ ಸಮಯದಲ್ಲಿ ತೋಟ, ಹೊಲಗಳಲ್ಲಿ ಕೆಲಸ ಮಾಡುವ ರೈತರು ಹಾಗೂ ಕಾರ್ಮಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕೊಲ್ಲೂರಿನ ಬಳಿ ಭೀಕರ ಅಪಘಾತ : ಕೇರಳದ ಇಬ್ಬರು ಸಾವು.. 8 ಮಂದಿಗೆ ಗಂಭೀರ ಗಾಯ!


















