ಬೆಂಗಳೂರು : ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ತಂಡಕ್ಕಿಂತ ವ್ಯಕ್ತಿಗಳನ್ನೇ ಹೆಚ್ಚು ಆರಾಧಿಸುವ ‘ಸೂಪರ್‌ಸ್ಟಾರ್ ಸಂಸ್ಕೃತಿ’ಯನ್ನು ಕೊನೆಗಾಣಿಸಬೇಕು ಎಂದು ದೀರ್ಘಕಾಲದಿಂದ ಪ್ರತಿಪಾದಿಸುತ್ತಾ ಬಂದಿದ್ದಾರೆ. ವೈಯಕ್ತಿಕ ಸಾಧನೆಗಳಿಗಿಂತ ತಂಡದ ಗೆಲುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಮತ್ತು ಮಾಧ್ಯಮಗಳು ಹಾಗೂ ಅಭಿಮಾನಿಗಳು ನಿರ್ದಿಷ್ಟ ಆಟಗಾರರನ್ನು ಹೀರೋಗಳಂತೆ ಮಾಡುವುದನ್ನು ನಿಲ್ಲಿಸಬೇಕು ಎಂಬುದು ಗಂಭೀರ್ ಅವರ ವಾದವಾಗಿದೆ. ಅವರ ಪ್ರಕಾರ, ಈ ಸಂಸ್ಕೃತಿಯು ತಂಡದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕ್ರೀಡೆಯನ್ನು ಕೇವಲ ಒಬ್ಬಿಬ್ಬರು ಆಟಗಾರರ ಸುತ್ತ ಸುತ್ತುವಂತೆ ಮಾಡುತ್ತದೆ.
ದ್ರಾವಿಡ್ ಅವರಿಂದ ಗಂಭೀರ್ ವಾದಕ್ಕೆ ಮೃದು ತಿರಸ್ಕಾರ
ಆದರೆ, ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಈ ವಿಚಾರದಲ್ಲಿ ಗಂಭೀರ್ ಅವರೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ರೀಡೆ ಅಂದ ಮೇಲೆ ಅಲ್ಲಿ ಹೀರೋಗಳ ಅಗತ್ಯವಿದ್ದೇ ಇರುತ್ತದೆ ಎಂಬುದು ದ್ರಾವಿಡ್ ಅವರ ಅಭಿಪ್ರಾಯ. ವಿಸ್ಡನ್‌ನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ದ್ರಾವಿಡ್, “ಯಾವುದೇ ಕ್ರೀಡೆಗೆ ತನ್ನದೇ ಆದ ಹೀರೋಗಳ ಅಗತ್ಯವಿರುತ್ತದೆ. ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡದೆ ಯಾರೂ ಹೀರೋ ಆಗಲು ಸಾಧ್ಯವಿಲ್ಲ. ಭಾರತದಂತಹ ದೇಶದಲ್ಲಿ ನೀವು ಏನನ್ನಾದರೂ ಸಾಧಿಸಿದಾಗ ಅಪಾರ ಪ್ರಶಂಸೆ ಸಿಗುತ್ತದೆ, ಹಾಗೆಯೇ ವಿಫಲವಾದಾಗ ಅಷ್ಟೇ ಟೀಕೆಗಳೂ ಕೇಳಿಬರುತ್ತವೆ. ಈ ಸವಾಲುಗಳನ್ನು ಮೀರಿ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮುವುದು ಎಂದರೆ ಅವರು ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದೇ ಅರ್ಥ” ಎಂದು ಅವರು ವಿವರಿಸಿದ್ದಾರೆ.
ರೋಹಿತ್-ವಿರಾಟ್ ಅನಿವಾರ್ಯತೆ ಕುರಿತು ದ್ರಾವಿಡ್ ಮಾತು
ಇತ್ತೀಚಿನ ದಿನಗಳಲ್ಲಿ ಭಾರತ ತಂಡವು ಗಂಭೀರ್ ಮಾರ್ಗದರ್ಶನದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅನುಭವಿಸಿದ ಹಿನ್ನಡೆಯ ಬಗ್ಗೆಯೂ ದ್ರಾವಿಡ್ ಮಾತನಾಡಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ದಿಗ್ಗಜ ಆಟಗಾರರನ್ನು ಸುಲಭವಾಗಿ ಬದಲಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಗಂಭೀರ್ ಕೋಚ್ ಆದ ನಂತರ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಅನುಭವಿಸಿದ ಸರಣಿ ಸೋಲುಗಳ ಬಗ್ಗೆ ಪ್ರಸ್ತಾಪಿಸಿದ ದ್ರಾವಿಡ್, ದೊಡ್ಡ ಆಟಗಾರರ ನಿವೃತ್ತಿ ಅಥವಾ ಅನುಪಸ್ಥಿತಿಯು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುವುದು ಸಹಜ. ಆದರೆ ಭಾರತೀಯ ಕ್ರಿಕೆಟ್ ಇಂದಿಗೂ ಬಲಿಷ್ಠವಾಗಿದ್ದು, ಶೀಘ್ರದಲ್ಲೇ ಲಯಕ್ಕೆ ಮರಳುವ ವಿಶ್ವಾಸವಿದೆ ಎಂದಿದ್ದಾರೆ.
ಯಶಸ್ವಿ ತಂಡಗಳಿಗೆ ಹೀರೋಗಳ ಅವಶ್ಯಕತೆ
ದ್ರಾವಿಡ್ ಅವರು ತಾವು ಆಡಿದ ಕಾಲದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಮತ್ತು ವೀರೇಂದ್ರ ಸೆಹ್ವಾಗ್ ಅವರಂತಹ ‘ಸೂಪರ್‌ಸ್ಟಾರ್’ ಆಟಗಾರರನ್ನು ನೆನಪಿಸಿಕೊಂಡಿದ್ದಾರೆ. ಇಂತಹ ಪ್ರಮುಖ ಆಟಗಾರರು ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಹೇಗೆ ಕಾರಣರಾದರು ಎಂಬುದನ್ನು ವಿವರಿಸಿದ್ದಾರೆ. ಒಟ್ಟಾರೆಯಾಗಿ, ಗಂಭೀರ್ ಅವರು ಎಲ್ಲರೂ ಸಮಾನರು ಎಂಬ ದೃಷ್ಟಿಕೋನವನ್ನು ಹೊಂದಿದ್ದರೆ, ದ್ರಾವಿಡ್ ಅವರು ವೈಯಕ್ತಿಕ ಶ್ರೇಷ್ಠತೆಯು ತಂಡದ ಬೆಳವಣಿಗೆಗೆ ಪೂರಕ ಮತ್ತು ಅಗತ್ಯ ಎಂದು ವಾದಿಸಿದ್ದಾರೆ. ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜರ ನಡುವಿನ ಈ ಸೈದ್ಧಾಂತಿಕ ಸಂಘರ್ಷವು ಈಗ ಕ್ರೀಡಾ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ನಾಂದಿ ಹಾಡಿದೆ.
ಇದನ್ನೂ ಓದಿ : ವರ್ಷಗಳ ಕಾಲ ಗ್ಯಾಂಗ್ ರೇಪ್, ಬ್ಲ್ಯಾಕ್‌ಮೇಲ್ ; ಅಕ್ಕನ ಬೆನ್ನಲ್ಲೇ ತಂಗಿಯೂ ಆತ್ಮಹತ್ಯೆಗೆ ಶರಣು!


















