ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಅಬ್ಬರಿಸುತ್ತಿರುವ ವಿರಾಟ್ ಕೊಹ್ಲಿ, ಹೊಸ ಪ್ರತಿಭೆಗಳಿಗೆ ಕ್ರೀಡಾ ಸ್ಫೂರ್ತಿಯ ಪಾಠ ಹೇಳಿಕೊಡುವ ಮೂಲಕ ಮತ್ತೆ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್‌ಜಿ) ವಿರುದ್ಧದ ಪಂದ್ಯದಲ್ಲಿ ಯುವ ವೇಗಿ ಪ್ರಿನ್ಸ್ ಯಾದವ್ ಬೌಲಿಂಗ್‌ನಲ್ಲಿ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಅಚ್ಚರಿಯೆಂದರೆ, ಪ್ರಿನ್ಸ್ ಯಾದವ್ ತಮಗೆ ಹೇಗೆ ಬೌಲಿಂಗ್ ಮಾಡಬೇಕು ಮತ್ತು ಯಾವ ಜಾಗದಲ್ಲಿ ಚೆಂಡು ಎಸೆಯಬೇಕು ಎಂಬ ಸಲಹೆಯನ್ನು ಸ್ವತಃ ವಿರಾಟ್ ಕೊಹ್ಲಿಯೇ ನೀಡಿದ್ದರಂತೆ.
ತಮ್ಮದೇ ವಿಕೆಟ್ ಪತನಕ್ಕೆ ಕಾರಣವಾದರೂ ಯುವ ಆಟಗಾರರಿಗೆ ಯಾಕೆ ಮಾರ್ಗದರ್ಶನ ನೀಡುತ್ತೇನೆ ಎಂಬುದನ್ನು ಕೊಹ್ಲಿ ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಕ್ರಿಕೆಟ್ ಭವಿಷ್ಯದ ದೃಷ್ಟಿಯಿಂದ ಸಲಹೆ ಮುಖ್ಯ
ತಮ್ಮ ಔಟ್ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, “ಹೌದು, ಪ್ರಿನ್ಸ್ ನನಗೆ ಅದ್ಭುತವಾದ ಎಸೆತವನ್ನು ಹಾಕಿದ. ನಾನು ಆತನಿಗೆ ಯಾವ ಜಾಗದಲ್ಲಿ ಚೆಂಡನ್ನು ಎಸೆಯಬೇಕು ಎಂದು ಹೇಳಿಕೊಟ್ಟಿದ್ದೆ. ಅದರಲ್ಲಿ ಯಾವುದೇ ತಪ್ಪಿಲ್ಲ” ಎಂದಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಪಂದ್ಯಗಳ ವೇಳೆಯೇ ಪ್ರಿನ್ಸ್ ಯಾದವ್ ಪರಿಚಯವಾಗಿತ್ತು ಎಂಬುದನ್ನು ಸ್ಮರಿಸಿದ ಅವರು, “ಮೊದಲು ಪ್ರಿನ್ಸ್ ನನಗೆ ಯಾರೆಂದೇ ಗೊತ್ತಿರಲಿಲ್ಲ. ಆತ ಅತ್ಯಂತ ಮೃದು ಹಾಗೂ ತಮಾಷೆಯ ಸ್ವಭಾವದ ಹುಡುಗ. ನಾನು ಆತನಿಗೆ ತುಂಬಾ ಹತ್ತಿರವಾದೆ. ಪಂದ್ಯಾವಳಿಗಳ ಮಧ್ಯೆ ಆತ ಹೇಗೆ ಬೌಲಿಂಗ್ ಮಾಡಬೇಕು, ಯಾವ ತಂತ್ರಗಳನ್ನು ಬಳಸಬೇಕು ಎಂದು ಹೇಳಿಕೊಡುತ್ತಿದ್ದೆ. ನಾವು ಶಾಶ್ವತವಾಗಿ ಇಲ್ಲಿಯೇ ಇರುವುದಿಲ್ಲ. ಯುವ ಆಟಗಾರರಿಗೆ ತಮ್ಮ ವೃತ್ತಿಜೀವನದಲ್ಲಿ ಏನನ್ನಾದರೂ ಕಲಿಯುವ ಹಾಗೂ ಉತ್ತಮಗೊಳ್ಳುವ ಅವಕಾಶ ಸಿಕ್ಕರೆ, ಅವರು ಭವಿಷ್ಯದಲ್ಲಿ ಭಾರತಕ್ಕಾಗಿ ಆಡುತ್ತಾರೆ. ಇದರಿಂದ ಕ್ರಿಕೆಟ್‌ನ ಗುಣಮಟ್ಟ ಸದಾ ಉನ್ನತ ಮಟ್ಟದಲ್ಲಿರುತ್ತದೆ” ಎಂದು ವಿವರಿಸಿದ್ದಾರೆ.
ಆಟಗಾರರು ತಮ್ಮ ಶ್ರೇಷ್ಠ ಮಟ್ಟದಲ್ಲಿರಬೇಕು ಎಂಬ ಹಂಬಲ
ಎದುರಾಳಿ ಆಟಗಾರರ ದೌರ್ಬಲ್ಯವನ್ನು ಬಳಸಿಕೊಂಡು ರನ್ ಗಳಿಸುವ ಬದಲು, ಅವರು ತಮ್ಮ ಶ್ರೇಷ್ಠ ಪ್ರದರ್ಶನ ನೀಡುತ್ತಿರುವಾಗಲೇ ಅವರ ವಿರುದ್ಧ ಸೆಣಸುವುದು ತಮಗೆ ಇಷ್ಟ ಎಂದು ಕೊಹ್ಲಿ ಹೇಳಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಗುಜರಾತ್ ಟೈಟಾನ್ಸ್ (ಜಿಟಿ) ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ನೀಡಿದ್ದ ಸಲಹೆಯೊಂದನ್ನು ಹಂಚಿಕೊಂಡಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯಕ್ಕೂ ಮುನ್ನ ಸಿರಾಜ್ ಜೊತೆ ಬೌಂಡರಿ ಲೈನ್ ಬಳಿ ಮಾತನಾಡಿದ್ದ ಕೊಹ್ಲಿ, “ನಾನು ಸಿರಾಜ್ ಅವರ ಓಟ ಮತ್ತು ಬೌಲಿಂಗ್ ಲಯದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ನನ್ನ ಗಮನಕ್ಕೆ ಬಂದ ವಿಷಯಗಳನ್ನು ಹಂಚಿಕೊಂಡೆ. ಸಿರಾಜ್ ತನ್ನ ಲಯದ ಬಗ್ಗೆ ಮಾತನಾಡಿದ. ಎರಡು ದಿನಗಳ ನಂತರ ನಾವು ಅವರ ವಿರುದ್ಧವೇ ಆಡಬೇಕಿತ್ತು. ಅವರು ತಮ್ಮ ಶ್ರೇಷ್ಠ ಫಾರ್ಮ್‌ನಲ್ಲಿದ್ದಾಗಲೇ ನಾನು ಅವರ ಬೌಲಿಂಗ್ ಅನ್ನು ಎದುರಿಸಲು ಸಿದ್ಧನಾಗಿದ್ದೆ. ಯಾರಾದರೂ ಕಷ್ಟಪಡುತ್ತಿದ್ದರೆ, ಅವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ” ಎಂದು ಕ್ರೀಡಾಸ್ಫೂರ್ತಿಯ ಮಾತುಗಳನ್ನಾಡಿದ್ದಾರೆ.
ಕ್ರಿಕೆಟ್ ಜಗತ್ತಿಗೆ ಮಾದರಿ
ಕೇವಲ ಆರ್‌ಸಿಬಿ ಆಟಗಾರನಾಗಿ ಮಾತ್ರವಲ್ಲದೆ, ಇಡೀ ಭಾರತೀಯ ಕ್ರಿಕೆಟ್‌ನ ಯುವ ಪೀಳಿಗೆಗೆ ಮಾರ್ಗದರ್ಶಕನಂತೆ ನಿಂತಿರುವ ವಿರಾಟ್ ಕೊಹ್ಲಿಯ ಈ ಗುಣ ಪ್ರಶಂಸೆಗೆ ಪಾತ್ರವಾಗಿದೆ. ಐಪಿಎಲ್‌ನಂತಹ ತೀವ್ರ ಪೈಪೋಟಿಯ ಟೂರ್ನಿಗಳಲ್ಲಿ ತಂಡಗಳ ನಡುವಿನ ವೈರತ್ವವನ್ನು ಬದಿಗಿಟ್ಟು, ಹೊಸ ಪ್ರತಿಭೆಗಳು ಬೆಳೆಯಲು ತಮ್ಮದೇ ರಹಸ್ಯಗಳನ್ನು ಹಂಚಿಕೊಳ್ಳುವ ಕೊಹ್ಲಿ ಅವರ ಈ ನಡೆಯು, ಅವರು ಕೇವಲ ಶ್ರೇಷ್ಠ ಬ್ಯಾಟರ್ ಮಾತ್ರವಲ್ಲ, ಶ್ರೇಷ್ಠ ಕ್ರೀಡಾಪಟು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮೇ 17 ರ ಭಾನುವಾರ ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಕೊಹ್ಲಿ ಮತ್ತೆ ಅಬ್ಬರಿಸುವ ನಿರೀಕ್ಷೆಯಿದೆ.



















