ಬೆಂಗಳೂರು : ಕೇಂದ್ರ ಸರ್ಕಾರದ ಜನಗಣತಿ ಅಭಿಯಾನಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಗರಿಕರಿಂದ ಭಾರೀ ಪ್ರಮಾಣದ ಸ್ಪಂದನೆ ವ್ಯಕ್ತವಾಗಿದ್ದು, ನಗರದ ಗಣತಿ ಕಾರ್ಯ ಶೇ.99.96ರಷ್ಟು ಪೂರ್ಣಗೊಂಡಿದೆ. ಕಳೆದ ತಿಂಗಳ 15ರಿಂದ ಆರಂಭವಾಗಿದ್ದ ಜನಗಣತಿ ಕಾರ್ಯ ಇಂದು ಅಂತಿಮ ಹಂತ ತಲುಪಿದ್ದು, ಸಂಜೆ ವೇಳೆಗೆ ಶೇ.100ರಷ್ಟು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಮಟ್ಟದಲ್ಲಿ ಶೇಕಡಾವಾರು ಆಧಾರದ ಮೇಲೆ ಅತ್ಯಧಿಕ ಜನಗಣತಿ ಪೂರ್ಣಗೊಳಿಸಿದ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದ್ದು, ಅದರಲ್ಲಿ ಬೆಂಗಳೂರಿನ ಪಾತ್ರ ಮಹತ್ವದ್ದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿಯೂ ಜನರಿಂದ ಉತ್ತಮ ಸಹಕಾರ ದೊರೆತಿದ್ದು, ಇದುವರೆಗೆ ಶೇ.99.96ರಷ್ಟು ಮಂದಿ ಗಣತಿ ಕಾರ್ಯದಲ್ಲಿ ಭಾಗವಹಿಸಿ ಮಾಹಿತಿ ನೀಡಿದ್ದಾರೆ. ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯದ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ನಡೆಸಿದ ಜಾಗೃತಿ ಅಭಿಯಾನವೂ ಪರಿಣಾಮಕಾರಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭದಲ್ಲಿ ಡೇಟಾ ಗೌಪ್ಯತೆ ಕುರಿತಾಗಿ ಕೆಲ ನಾಗರಿಕರಲ್ಲಿ ಆತಂಕ ವ್ಯಕ್ತವಾಗಿದ್ದರೂ, ಸರ್ಕಾರ ಹಾಗೂ ಜಿಬಿಎ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಿ ವಿಶ್ವಾಸ ಮೂಡಿಸಿದ ಪರಿಣಾಮ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದಾರೆ ಎನ್ನಲಾಗಿದೆ.
ವಿಶೇಷವಾಗಿ ಐಟಿ ಕಂಪನಿಗಳು, ಗೇಟೆಡ್ ಸಮುದಾಯಗಳು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಗಣತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ರಾಜ್ಯದ ಇತರೆ ಜಿಲ್ಲೆಗಳಿಗಿಂತ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾಗರಿಕರು ಸ್ವಯಂಪ್ರೇರಿತವಾಗಿ ಪಾಲ್ಗೊಂಡಿರುವುದು ಗಮನಾರ್ಹವಾಗಿದೆ. ನಗರದ ಜನತೆಗೆ ಹಾಗೂ ಗಣತಿ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ, ಅಧಿಕಾರಿಗಳಿಗೆ ಜಿಬಿಎ ಹಿರಿಯ ಅಧಿಕಾರಿಗಳು ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ : ಪತ್ನಿಯ ಪ್ರೇಮಿಯನ್ನು ಪಾರ್ಟಿಗೆ ಕರೆದು ಗಂಟಲು ಸೀಳಿ ಹತ್ಯೆ : ಬೆಚ್ಚಿಬಿದ್ದ ಮುಂಬೈ ಜನ!



















