ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬೆಂಗಳೂರು ರಾಜ್ಯ ಯೋಜನೆಯಡಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಕಾಡುಮಲ್ಲೇಶ್ವರ – 2 ಅಂಗನವಾಡಿ ಕೇಂದ್ರ ಮತ್ತು 10 ಅಂಗನವಾಡಿ ಕಂ ಕ್ರೀಚ್ ಕೇಂದ್ರಗಳ ಉದ್ಘಾಟನಾ ಸಮಾರಂಭವು ಇದೇ ಬರುವ ಮೇ 16ರಂದು (ಶನಿವಾರ) ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ್ ವಹಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಕ್ಷೇತ್ರದಲ್ಲಿ ಜಾರಿಗೆ ತಂದಿರುವ ಶಾಸಕರು, ಇದೀಗ ಹೊಸ ಅಂಗನವಾಡಿ ಮತ್ತು ಕ್ರೀಚ್ ಕೇಂದ್ರಗಳ ಮೂಲಕ ಮಕ್ಕಳ ಆರೈಕೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕ ನಿಶ್ಚಲ್ ಬಿ.ಹೆಚ್ ಅವರು ಕೂಡ ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ವೈಯಾಲಿಕಾವಲ್‌ನ 12ನೇ ‘ಸಿ’ ಅಡ್ಡ ರಸ್ತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಈ ಮೂಲಕ ಅಂಗನವಾಡಿ ಕೇಂದ್ರ ಮತ್ತು ಕ್ರೀಚ್ ಕೇಂದ್ರವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುತ್ತಿದೆ. ಮಕ್ಕಳ ಆರೈಕೆ, ಮಹಿಳಾ ಆರೋಗ್ಯ ಹಾಗೂ ಪೌಷ್ಟಿಕತೆ ಕುರಿತ ಸರ್ಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಈ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಅಂಗನವಾಡಿ ಕಂ ಕ್ರೀಚ್ ಕೇಂದ್ರಗಳಲ್ಲಿನ ಸೌಲಭ್ಯಗಳು :
ಮಿಷನ್ ಶಕ್ತಿ ಯೋಜನೆಯಡಿ ಕಾರ್ಯನಿರ್ವಹಿಸಲಿರುವ ಅಂಗನವಾಡಿ ಕಂ ಕ್ರೀಚ್ ಕೇಂದ್ರವನ್ನು ಶಿಶು ಪಾಲನಾ ಕೇಂದ್ರವಾಗಿ ಅನುಷ್ಠಾನಗೊಳಿಸಲಾಗಿದೆ. ಈ ಕೇಂದ್ರವನ್ನು ಬೆಳಿಗ್ಗೆ 08 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ತೆರೆಯಲಾಗುತ್ತಿದ್ದು, ಉದ್ಯೋಗದಲ್ಲಿರುವ ಪೋಷಕರಿಗೆ ದೊಡ್ಡ ಸಹಾಯವಾಗಲಿದೆ. 06 ತಿಂಗಳಿಂದ 06 ವರ್ಷದೊಳಗಿನ ಮಕ್ಕಳಿಗೆ ಆರೈಕೆ, ಸುರಕ್ಷತೆ ಮತ್ತು ಪೌಷ್ಟಿಕ ಆಹಾರ ಸೌಲಭ್ಯವನ್ನು ಇಲ್ಲಿ ಒದಗಿಸಲಾಗುತ್ತದೆ.
ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ :
ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿ ಗರ್ಭಿಣಿ ಹಾಗೂ ಬಾಣಂತಿಯರ ಆರೈಕೆಗೆ ಮೊಟ್ಟೆ, 150 ಗ್ರಾಂ ಹಾಲು, ಅಕ್ಕಿ, ಗೋಧಿ, ಹೆಸರು ಕಾಳು ಮತ್ತು ತೊಗರಿ ಬೇಳೆ ಸೇರಿದಂತೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತದೆ. ಜೊತೆಗೆ ಆರೋಗ್ಯ ತಪಾಸಣೆ ಹಾಗೂ ಲಸಿಕೆ ಸೌಲಭ್ಯಗಳನ್ನು ಕೂಡ ನೀಡಲಾಗುತ್ತದೆ.
ಮಾತೃ ವಂದನಾ ಮತ್ತು ಭಾಗ್ಯಲಕ್ಷ್ಮೀ ಯೋಜನೆಗಳ ಸೌಲಭ್ಯ :
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಮೊದಲ ಮಗುವಿಗೆ ರೂ. 5,000 ಹಾಗೂ ಎರಡನೇ ಹೆಣ್ಣು ಮಗುವಿನ ಜನನದ ನಂತರ ರೂ. 6,000 ಹಣವನ್ನು ಕಂತುಗಳಲ್ಲಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಭಾಗ್ಯಲಕ್ಷ್ಮೀ ಸುಕನ್ಯಾ ಸಮೃದ್ಧಿ ಯೋಜನೆಯಡಿ ಎರಡು ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಪಾಸ್ ಪುಸ್ತಕ ವಿತರಿಸಲಾಗುತ್ತಿದ್ದು, 18 ವರ್ಷ ತುಂಬಿದ ನಂತರ ರೂ. 1 ಲಕ್ಷದವರೆಗೆ ಪರಿಷ್ಕೃತ ಮೊತ್ತ ಪಡೆಯುವ ಅವಕಾಶವಿದೆ.
ಇನ್ನು, 06 ತಿಂಗಳಿಂದ 03 ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಆರೋಗ್ಯ ತಪಾಸಣೆ ಸೌಲಭ್ಯ ನೀಡಲಾಗುತ್ತದೆ. ಅಂಗನವಾಡಿ ಕೇಂದ್ರಕ್ಕೆ ಹಾಜರಾಗುವ 03 ರಿಂದ 06 ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ, ಮಧ್ಯಾಹ್ನ ಬಿಸಿ ಊಟ, ಮೊಟ್ಟೆ, ಹಾಲು ಹಾಗೂ ನಿಯಮಿತ ಆರೋಗ್ಯ ತಪಾಸಣೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಮಕ್ಕಳ ಭವಿಷ್ಯ, ಮಹಿಳೆಯರ ಆರೋಗ್ಯ ಹಾಗೂ ಕುಟುಂಬಗಳ ಕಲ್ಯಾಣಕ್ಕಾಗಿ ರೂಪಿಸಲಾದ ಯೋಜನೆಗಳ ಸೌಲಭ್ಯವನ್ನು ಪ್ರತಿಯೊಬ್ಬರೂ ಬಳಸಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮನವಿ ಮಾಡಿದೆ.
ಇದನ್ನೂ ಓದಿ ; ಕುಕ್ಕೆ ಸುಬ್ರಹ್ಮಣ್ಯ ದರ್ಶನಕ್ಕೆ ತೆರಳುವ ಭಕ್ತರಿಗೆ ಶುಭಸುದ್ದಿ!



















