ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ರೋಚಕ ಪಂದ್ಯವೊಂದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಗುಜರಾತ್ ಟೈಟನ್ಸ್ ಎದುರು ಹೀನಾಯ ಸೋಲನುಭವಿಸಿದೆ. ಕೇವಲ 86 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಸೋತ ಪಂದ್ಯವೊಂದರಲ್ಲಿ ತನ್ನ ಅತಿ ಕಡಿಮೆ ಮೊತ್ತವನ್ನು ದಾಖಲಿಸಿ ತೀವ್ರ ಮುಖಭಂಗ ಅನುಭವಿಸಿದೆ.
ಆದರೆ, ಇಂತಹ ಕಳಪೆ ಪ್ರದರ್ಶನದ ನಡುವೆಯೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ತಮ್ಮ ಬ್ಯಾಟಿಂಗ್ ವಿಭಾಗದ ಬೆನ್ನಿಗೆ ದೃಢವಾಗಿ ನಿಂತಿದ್ದಾರೆ. ಇದೊಂದು ಆಕಸ್ಮಿಕ ಕುಸಿತವಷ್ಟೇ ಹೊರತು ಬೇರೇನೂ ಅಲ್ಲ, ಈ ಬಾರಿಯ ಟೂರ್ನಿಯಲ್ಲಿ ನಮ್ಮ ತಂಡದ ಬ್ಯಾಟರ್‌ಗಳು ಅದ್ಭುತವಾಗಿ ಆಡಿದ್ದಾರೆ ಎಂದು ಅವರು ಹೇಳುವ ಮೂಲಕ ಆಟಗಾರರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿದ್ದಾರೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಗುಜರಾತ್ ಟೈಟನ್ಸ್ ತಂಡವು ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್‌ಗೆ ಲಗ್ಗೆಯಿಟ್ಟ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗುಜರಾತ್ ಟೈಟನ್ಸ್ ಮಾರಕ ಬೌಲಿಂಗ್‌ಗೆ ತತ್ತರಿಸಿದ ಸನ್‌ರೈಸರ್ಸ್
ಗುಜರಾತ್ ಟೈಟನ್ಸ್ ನೀಡಿದ್ದ 170 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರಂಭದಿಂದಲೇ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಅಹಮದಾಬಾದ್‌ನ ಪಿಚ್ ವೇಗಿಗಳಿಗೆ ಉತ್ತಮ ನೆರವು ನೀಡುತ್ತಿತ್ತು. ಇದನ್ನು ಕರಾರುವಾಕ್ಕಾಗಿ ಬಳಸಿಕೊಂಡ ಗುಜರಾತ್‌ನ ಬೌಲರ್‌ಗಳು ಹೈದರಾಬಾದ್ ಬ್ಯಾಟರ್‌ಗಳಿಗೆ ಯಾವುದೇ ರೀತಿಯ ರನ್ ಗಳಿಸುವ ಅವಕಾಶವನ್ನು ನೀಡಲಿಲ್ಲ. ಮೊಹಮ್ಮದ್ ಸಿರಾಜ್ ಮತ್ತು ಕಗಿಸೊ ರಬಾಡ ಅವರ ಮಾರಕ ವೇಗದ ಬೌಲಿಂಗ್ ದಾಳಿಗೆ ಹೈದರಾಬಾದ್ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಅಕ್ಷರಶಃ ನಲುಗಿ ಹೋದರು. ಪವರ್‌ಪ್ಲೇ ಅವಧಿಯಲ್ಲೇ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ಹೈದರಾಬಾದ್ ಚೇತರಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಆರಂಭಿಕ ಆಘಾತದ ನಂತರ ಕ್ರೀಸ್‌ಗೆ ಬಂದ ಬ್ಯಾಟರ್‌ಗಳ ಮೇಲೆ ಜೇಸನ್ ಹೋಲ್ಡರ್ ನಿಖರವಾದ ದಾಳಿ ನಡೆಸುವ ಮೂಲಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದರು. ಇನ್ನುಳಿದಂತೆ ಪ್ರಸಿದ್ಧ್ ಕೃಷ್ಣ ಹಾಗೂ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಅವರು ಹೈದರಾಬಾದ್ ತಂಡವು ಪಂದ್ಯಕ್ಕೆ ಮರಳಲು ಯಾವುದೇ ಹಾದಿಯನ್ನು ಉಳಿಸಲಿಲ್ಲ. ಪರಿಣಾಮವಾಗಿ ಇಡೀ ತಂಡವು ಕೇವಲ 86 ರನ್‌ಗಳಿಗೆ ಸರ್ವಪತನ ಕಂಡಿತು.
ಆಟಗಾರರ ಮೇಲೆ ಗೂಬೆ ಕೂರಿಸಲು ನಿರಾಕರಿಸಿದ ಕೋಚ್ ವೆಟ್ಟೋರಿ
ಇಷ್ಟೊಂದು ಹೀನಾಯವಾಗಿ ಬ್ಯಾಟಿಂಗ್ ವಿಭಾಗವು ವೈಫಲ್ಯ ಕಂಡರೂ ಸಹ, ಕೋಚ್ ಡೇನಿಯಲ್ ವೆಟ್ಟೋರಿ ಯಾವುದೇ ಒಬ್ಬ ಆಟಗಾರನ ಮೇಲೆ ಸೋಲಿನ ಹೊಣೆಗಾರಿಕೆಯನ್ನು ವಹಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯುವುದು ನಮ್ಮ ಪ್ರಮುಖ ಗುರಿಯಾಗಿರುತ್ತದೆ, ಆದರೆ ಈ ಪಂದ್ಯದಲ್ಲಿ ನಾವು ಆ ರೀತಿ ಶುಭಾರಂಭ ಮಾಡಲು ವಿಫಲರಾದೆವು ಎಂದರು. ಆಟದಲ್ಲಿ ಇದೆಲ್ಲಾ ಸಹಜ ಎಂದ ವೆಟ್ಟೋರಿ, “ಈ ಒಂದು ಸೋಲಿನಿಂದಾಗಿ ನಮ್ಮ ಬ್ಯಾಟಿಂಗ್ ವಿಭಾಗದ ಮೇಲೆ ನನಗಿರುವ ಅಪಾರ ನಂಬಿಕೆ ಬದಲಾಗುವುದಿಲ್ಲ. ಈ ವರ್ಷ ನಮ್ಮ ಆಟಗಾರರು ಅಸಾಧಾರಣ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
ಐಪಿಎಲ್‌ನಂತಹ ದೀರ್ಘಾವಧಿಯ ಟೂರ್ನಿಯಲ್ಲಿ ಆಡುವಾಗ ಪ್ರತಿಯೊಂದು ತಂಡಕ್ಕೂ ಒಂದಲ್ಲಾ ಒಂದು ದಿನ ಇಂತಹ ಸಣ್ಣ ಹಿನ್ನಡೆಗಳು ಎದುರಾಗುವುದು ಸಹಜ, ನಮಗೂ ಇಂದು ಅದೇ ರೀತಿಯಾಗಿದೆ ಅಷ್ಟೇ. ನಮ್ಮ ಆಟಗಾರರು ಮುಂಬರುವ ಪಂದ್ಯಗಳಲ್ಲಿ ಖಂಡಿತವಾಗಿಯೂ ಪ್ರಬಲವಾಗಿ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗುಜರಾತ್ ಬೌಲರ್‌ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು ಎಂಬುದನ್ನು ಒಪ್ಪಿಕೊಂಡ ವೆಟ್ಟೋರಿ, ಮೊದಲ ಎರಡು ವಿಕೆಟ್‌ಗಳು ಅನಿರೀಕ್ಷಿತವಾಗಿ ಪತನಗೊಂಡದ್ದು ತಂಡವನ್ನು ಸಂಕಷ್ಟಕ್ಕೆ ನೂಕಿತು ಎಂದರು.
ಬೌಲರ್‌ಗಳ ಶಿಸ್ತುಬದ್ಧ ಪ್ರದರ್ಶನಕ್ಕೆ ಮೆಚ್ಚುಗೆ
ಒಂದೆಡೆ ಬ್ಯಾಟಿಂಗ್ ವಿಭಾಗವು ತೀವ್ರ ನಿರಾಸೆ ಮೂಡಿಸಿದರೂ, ಹೈದರಾಬಾದ್ ತಂಡದ ಬೌಲಿಂಗ್ ವಿಭಾಗವು ತೋರಿದ ಅತ್ಯುತ್ತಮ ಪ್ರದರ್ಶನವನ್ನು ಡೇನಿಯಲ್ ವೆಟ್ಟೋರಿ ಮುಕ್ತಕಂಠದಿಂದ ಶ್ಲಾಘಿಸಿದರು. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಗುಜರಾತ್ ಟೈಟನ್ಸ್ ತಂಡವನ್ನು ಕೇವಲ 169 ರನ್‌ಗಳಿಗೆ ನಿಯಂತ್ರಿಸಿದ್ದು ನಿಜಕ್ಕೂ ಪ್ರಶಂಸನೀಯ ಎಂದು ಅವರು ಬಣ್ಣಿಸಿದ್ದಾರೆ. ಬೌಲಿಂಗ್ ವಿಭಾಗದಿಂದ ನೂರಕ್ಕೆ ನೂರರಷ್ಟು ಪರಿಪೂರ್ಣತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ, ಆದರೆ ಈ ಪಂದ್ಯದಲ್ಲಿ ಬೌಲರ್‌ಗಳು ನೀಡಿದ ಪ್ರದರ್ಶನ ತೃಪ್ತಿದಾಯಕವಾಗಿದೆ ಎಂದು ಅವರು ಹೇಳಿದರು.
“ಸಾಕಿಬ್ ಅವರ ಕೊನೆಯ ಓವರ್ ಅತ್ಯಂತ ಅದ್ಭುತವಾಗಿತ್ತು. ಪ್ಯಾಟ್ ಕಮಿನ್ಸ್ ಅವರು ವಿಕೆಟ್ ಕಬಳಿಸುವ ಉದ್ದೇಶದಿಂದಲೇ ಬೌಲಿಂಗ್ ದಾಳಿಗೆ ಇಳಿದು, ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಅವರ ಬೌಲಿಂಗ್ ಸ್ಪೆಲ್ ನಿಜಕ್ಕೂ ಅಸಾಧಾರಣವಾಗಿತ್ತು. ಮಲಿಂಗ ಅವರ ಒಂದು ಓವರ್‌ನಲ್ಲಿ ಸ್ವಲ್ಪ ಹೆಚ್ಚು ರನ್‌ಗಳು ಬಿಟ್ಟುಕೊಟ್ಟಿರಬಹುದು, ಆದರೆ ಇಡೀ ಟೂರ್ನಿಯಲ್ಲಿ ಅವರ ಪ್ರದರ್ಶನ ಅಮೋಘವಾಗಿದೆ. ಗುಜರಾತ್‌ನಂತಹ ತಂಡವನ್ನು ೧೭೦ ರನ್‌ಗಳ ಒಳಗೆ ಕಟ್ಟಿಹಾಕಿದ್ದು ನಮ್ಮ ಬೌಲರ್‌ಗಳ ಶ್ರಮಕ್ಕೆ ಸಾಕ್ಷಿ,” ಎಂದು ವೆಟ್ಟೋರಿ ಬೆನ್ನು ತಟ್ಟಿದರು.
ಇದನ್ನೂ ಓದಿ : ಪ್ಲೇ-ಆಫ್ಸ್ ಸನಿಹದಲ್ಲಿರುವ RCBಗೆ ಮರುಜೀವ ಪಡೆದ KKR ಸವಾಲು ; ಕೊಹ್ಲಿ ಫಾರ್ಮ್ ಮೇಲೆ ಕಣ್ಣು!



















