ಬೆಂಗಳೂರು : ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಸಿ ಟೌನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ವೇಳೆ ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಏಕಾಏಕಿ ಬ್ಲಾಸ್ಟ್ ಆಗಿದೆ. ಸ್ಫೋಟದ ಬಳಿಕ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯೊಳಗಿದ್ದ ವ್ಯಕ್ತಿ ಸಜೀವ ದಹನವಾಗಿದ್ದಾರೆ.
ಮೃತ ವ್ಯಕ್ತಿಯನ್ನು ಲೂರ್ಧ್ ನಾಥನ್ (66) ಎಂದು ಗುರುತಿಸಲಾಗಿದೆ. ಅವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ರಾತ್ರಿ ವೇಳೆ ತಮ್ಮ ಎಲೆಕ್ಟ್ರಿಕ್ ಬೈಕ್ ಅನ್ನು ಮನೆಯೊಳಗೆ ಚಾರ್ಜ್‌ಗೆ ಹಾಕಿ, ಅದರ ಪಕ್ಕದಲ್ಲೇ ಹಾಲ್‌ನಲ್ಲಿ ಮಲಗಿದ್ದರು. ಮುಂಜಾನೆ ಸುಮಾರು 3.15ರ ವೇಳೆಗೆ ಬ್ಯಾಟರಿ ಸ್ಫೋಟಗೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ. ಈ ವೇಳೆ ಲೂರ್ಧ್ ನಾಥನ್ ಹೊರಗೆ ಬರಲು ಸಾಧ್ಯವಾಗದೇ ಮನೆ ಒಳಗೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ.
ಮಾಹಿತಿಗಳ ಪ್ರಕಾರ ಮೃತ ಲೂರ್ಧ್ ನಾಥನ್ ಗ್ರೌಂಡ್ ಫ್ಲೋರ್‌ನ ಮನೆಯಲ್ಲಿ ಒಬ್ಬರೇ ಮಲಗಿದ್ದರು. ಅವರ ಮಕ್ಕಳು ಫಸ್ಟ್ ಫ್ಲೋರ್‌ನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಸ್ಫೋಟದ ಸದ್ದು ಕೇಳಿ ಮೇಲಂತಸ್ತಿನಲ್ಲಿದ್ದ ಕುಟುಂಬದವರು ಬೆಚ್ಚಿಬಿದ್ದಿದ್ದು, ತಕ್ಷಣ ಹೊರಗೆ ಬಂದಿದ್ದಾರೆ. ಆದರೆ ಆಗಾಗಲೇ ಕೆಳ ಮಹಡಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡ ಹಾಗೂ ಬ್ಯಾಟರಿ ಸ್ಫೋಟದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಈ ಬಾರಿ ವಾಡಿಕೆಗಿಂತ 1 ವಾರ ಮೊದಲೇ ಮುಂಗಾರು ಎಂಟ್ರಿ – ಹವಾಮಾನ ಇಲಾಖೆ ಎಚ್ಚರಿಕೆ ಏನು?


















