ಬೆಂಗಳೂರು : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಮಟ್ಟದ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಡಿವೈಎಸ್‌ಪಿ ದರ್ಜೆಯ ಅಧಿಕಾರಿಗಳು ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ಕೊನೆಗೂ ಚಾಲನೆ ನೀಡಲಾಗಿದ್ದು, ಒಟ್ಟು 74 ಡಿವೈಎಸ್‌ಪಿ (ಸಿವಿಲ್) ಹಾಗೂ 293 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸೇವೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
74 ಡಿವೈಎಸ್‌ಪಿಗಳ ವರ್ಗಾವಣೆ
74 ಡಿವೈಎಸ್‌ಪಿ (ಸಿವಿಲ್) ದರ್ಜೆಯ ಅಧಿಕಾರಿಗಳಿಗೆ ಹೊಸ ಸ್ಥಳಗಳನ್ನು ನಿಯುಕ್ತಿಗೊಳಿಸಲಾಗಿದ್ದು, ಉಪವಿಭಾಗಗಳ ಎಸಿಪಿ (ACP) ಮತ್ತು ಡಿವೈಎಸ್‌ಪಿ ಹುದ್ದೆಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಬೆಂಗಳೂರು ನಗರದ ಸಂಚಾರ ವಿಭಾಗ, ವಿಶೇಷ ಜಾರಿ ಕೋಶ (EEC) ಮತ್ತು ಜಿಲ್ಲಾ ಪೊಲೀಸ್ ಉಪವಿಭಾಗಗಳಲ್ಲಿ ಹೊಸ ಅಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ






293 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ
ವರ್ಗಾವಣೆಗೊಂಡ 293 ಇನ್ಸ್‌ಪೆಕ್ಟರ್‌ಗಳಲ್ಲಿ ಹೆಚ್ಚಿನವರು ಬೆಂಗಳೂರು ನಗರ, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡದಂತಹ ಪ್ರಮುಖ ನಗರ ಪ್ರದೇಶಗಳ ವಿವಿಧ ಠಾಣೆಗಳಿಗೆ ನಿಯುಕ್ತಿಗೊಂಡಿದ್ದಾರೆ. ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ ಮತ್ತು ವಿಶೇಷ ತನಿಖಾ ತಂಡಗಳಿಂದ (SIT) ಹಲವು ಅಧಿಕಾರಿಗಳನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ತರಲಾಗಿದ್ದರೆ, ಕೆಲವು ಅನುಭವಿ ಅಧಿಕಾರಿಗಳನ್ನು ಕ್ರೈಂ ಬ್ರಾಂಚ್ ಮತ್ತು ಗುಪ್ತಚರ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ.
ಇನ್ನು, ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹಳೆಯ ಹುದ್ದೆಗಳಿಂದ ಬಿಡುಗಡೆಗೊಂಡು, ನಿಯೋಜಿತ ಹೊಸ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.


ಇದನ್ನೂ ಓದಿ : ವಿಜಯ್ ಸಿಎಂ ಪಟ್ಟದ ಹಿಂದೆ ಸ್ಟಾಲಿನ್ ‘ಮಾಸ್ಟರ್ ಸ್ಟ್ರೋಕ್’ ಇದೆ ಎಂದ DMK



















