ಚೆನ್ನೈ : ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ, ನಟ ಸಿ. ಜೋಸೆಫ್ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು (ಭಾನುವಾರ) ಚೆನ್ನೈನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಆಗಮಿಸಿದ ನಟಿ ತ್ರಿಷಾ ಕೃಷ್ಣನ್ ಎಲ್ಲರ ಗಮನ ಸೆಳೆದರು.
ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ ನಟಿ ತ್ರಿಷಾ, ತೆಳು ನೀಲಿ ಬಣ್ಣದ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದರು. ಚಿನ್ನದ ಬಣ್ಣದ ವಿನ್ಯಾಸವಿದ್ದ ಈ ಸೀರೆಗೆ, ಕ್ರೀಮ್ ಬಣ್ಣದ ಎಂಬ್ರಾಯ್ಡರಿ ರವಿಕೆ ಧರಿಸಿದ್ದರು. ವಜ್ರ ಮತ್ತು ಕೆಂಪು ಹರಳಿನ ಚೋಕರ್, ಕಿವಿಯೋಲೆ, ಹಣೆಯಲ್ಲೊಂದು ಸಣ್ಣ ಬಿಂದಿ ಹಾಗೂ ತಲೆತುಂಬಾ ಮಲ್ಲಿಗೆ ಹೂವು ಮುಡಿದಿದ್ದ ಅವರ ಸಾಂಪ್ರದಾಯಿಕ ನೋಟ ನೆರೆದಿದ್ದವರ ಕಣ್ಮನ ಸೆಳೆಯುವಂತಿತ್ತು. ತಮ್ಮ ತಾಯಿ ಉಮಾ ಕೃಷ್ಣನ್ ಅವರೊಂದಿಗೆ ಆಗಮಿಸಿದ ತ್ರಿಷಾ, ನಾನು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರಳಾಗಿದ್ದೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ತಮಿಳುನಾಡಿನಲ್ಲಿ ವಿಜಯ್ ಪಕ್ಷದ ಐತಿಹಾಸಿಕ ಗೆಲುವು
ಇತ್ತೀಚೆಗಷ್ಟೇ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 1960ರ ದಶಕದಿಂದಲೂ ತಮಿಳುನಾಡನ್ನು ಆಳುತ್ತಿದ್ದ ದ್ರಾವಿಡ ದೈತ್ಯರಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನು ಮಣಿಸಿ ವಿಜಯ್ ಅವರ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದು ಹೊಸ ಇತಿಹಾಸ ಸೃಷ್ಟಿಸಿದೆ.
ಚುನಾವಣೆದುದ್ದಕ್ಕೂ ದಳಪತಿಗೆ ತ್ರಿಷಾ ಸಾಥ್
ಚುನಾವಣಾ ಫಲಿತಾಂಶ ಪ್ರಕಟವಾದ ಮೇ 4ರಂದು ತ್ರಿಷಾ ಅವರ ಹುಟ್ಟುಹಬ್ಬವೂ ಆಗಿತ್ತು. ಆ ದಿನ ಬೆಳ್ಳಂಬೆಳಿಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದ ಅವರು, ವಿಜಯ್ ಪಕ್ಷ ಮುನ್ನಡೆ ಸಾಧಿಸುತ್ತಿದ್ದಂತೆಯೇ ಅವರ ಚೆನ್ನೈ ನಿವಾಸಕ್ಕೂ ಭೇಟಿ ನೀಡಿ ಶುಭಕೋರಿದ್ದರು. ಅದಕ್ಕೂ ಮುನ್ನ, ಏಪ್ರಿಲ್ 23 ರಂದು ಮತದಾನ ಮಾಡಿದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ತ್ರಿಷಾ, ಹಿನ್ನೆಲೆ ಸಂಗೀತವಾಗಿ ತಮ್ಮ ಹಾಗೂ ವಿಜಯ್ ಅಭಿನಯದ ಹಿಟ್ ಚಿತ್ರ ‘ಗಿಲ್ಲಿ’ಯ ಹಾಡನ್ನು ಬಳಸಿಕೊಂಡಿದ್ದರು. ಇದು ತಮ್ಮ ಬಹುಕಾಲದ ಸ್ನೇಹಿತ ಹಾಗೂ ನೆಚ್ಚಿನ ಸಹನಟನಿಗೆ ಅವರು ನೀಡಿದ ಪರೋಕ್ಷ ಬೆಂಬಲ ಎಂದೇ ವಿಶ್ಲೇಷಿಸಲಾಗಿತ್ತು.
ವಿಜಯ್-ತ್ರಿಷಾ ಬಾಂಧವ್ಯದ ಮೇಲೆ ವಿವಾದದ ನೆರಳು
ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾದ ವಿಜಯ್ ಮತ್ತು ತ್ರಿಷಾ, ‘ಗಿಲ್ಲಿ’, ‘ಕುರುವಿ’, ‘ಆತಿ’, ‘ತಿರುಪಾಚಿ’ ಮತ್ತು ಇತ್ತೀಚಿನ ‘ಲಿಯೋ’ ಸೇರಿದಂತೆ ಐದು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಆದರೆ, ಇತ್ತೀಚೆಗೆ ಫೆಬ್ರವರಿ 27 ರಂದು ವಿಜಯ್ ಪತ್ನಿ ಸಂಗೀತಾ ಅವರು ಚೆಂಗಲ್‌ಪೇಟೆ ಜಿಲ್ಲಾ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು.
ಅರ್ಜಿಯಲ್ಲಿ, ವಿಜಯ್ ಅವರು ಸಹನಟಿಯೊಬ್ಬರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಹಾಗೂ ವೈವಾಹಿಕ ಜೀವನದಲ್ಲಿ ತಮಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದರು ಎನ್ನಲಾಗಿದೆ. ಈ ವಿವಾದದ ಬೆನ್ನಲ್ಲೇ, ಮಾರ್ಚ್‌ನಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮವೊಂದರಲ್ಲಿ ವಿಜಯ್ ಮತ್ತು ತ್ರಿಷಾ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆದಾಗ್ಯೂ, ತಮ್ಮಿಬ್ಬರ ಸಂಬಂಧದ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಕುರಿತು ಇಬ್ಬರೂ ನಟರು ಇದುವರೆಗೂ ಮೌನ ವಹಿಸಿದ್ದಾರೆ.
ಇದನ್ನೂ ಓದಿ : ವಿಜಯ್ ಸಿಎಂ ಪಟ್ಟದ ಹಿಂದೆ ಸ್ಟಾಲಿನ್ ‘ಮಾಸ್ಟರ್ ಸ್ಟ್ರೋಕ್’ ಇದೆ ಎಂದ DMK



















