ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಏ.10) ಬೆಂಗಳೂರಿಗೆ ಆಗಮಿಸಲಿದ್ದು, ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿದೆ.
ಈ ವರ್ಷ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ತನ್ನ 45ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ತಮ್ಮ 70ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ವಾಹನ ಸವಾರರ ಅನುಕೂಲಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ಸಂಚಾರ ನಿರ್ಬಂಧ ಹಾಗೂ ಪರ್ಯಾಯ ಮಾರ್ಗಗಳ ಮಾಹಿತಿಯನ್ನು ಪ್ರಕಟಿಸಿದ್ದಾರೆ.
ಸಂಚಾರ ನಿರ್ಬಂಧಿತ ಪ್ರದೇಶಗಳು
- ಹೆಚ್.ಎ.ಎಲ್ ವಿಮಾನ ನಿಲ್ದಾಣ ಎಕ್ಸಿಟ್ ರಸ್ತೆಯಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಡಿ.ಜಿ.ಸಿ.ಎ ಕಚೇರಿವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.(ಎರಡೂ ಬದಿಯಲ್ಲಿ)
- ಹೆಚ್.ಎ.ಎಲ್ ವಿಮಾನ ನಿಲ್ದಾಣ ಗೇಟ್ ನಂ.30 ರಸ್ತೆಯಲ್ಲಿ ಅಂಬ್ರೆಲಾ ಜಂಕ್ಷನ್‌ನಿಂದ ಗೇಟ್ ನಂ.30ರ ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.(ಎರಡೂ ಬದಿಯಲ್ಲಿ)
ವಾಹನ ನಿಲುಗಡೆ ನಿರ್ಬಂಧಿಸಿರುವ ರಸ್ತೆಗಳು
- ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಎಸ್.ಡಿ ರಸ್ತೆ ಜಂಕ್ಷನ್‌ನಿಂದ ಟ್ರಿನಿಟಿ ಜಂಕ್ಷನ್‌ವರೆಗೆ
- HAL ವಿಮಾನ ನಿಲ್ದಾಣ ಗೇಟ್ ನಂ. 30 ರಸ್ತೆಯಲ್ಲಿ ಅಂಬ್ರೆಲಾ ಜಂಕ್ಷನ್‌ನಿಂದ ಗೇಟ್ ನಂ. 30ರ ವರೆಗೆ
- HAL ವಿಮಾನ ನಿಲ್ದಾಣ ಎಕ್ಸಿಟ್ ರಸ್ತೆಯಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆಯಿಂದ DGCA ಕಚೇರಿವರೆಗೆ
ಪಾರ್ಕಿಂಗ್ ಸ್ಥಳಗಳು
- HAL ಟ್ರಾನ್ಸ್‌ಪೋರ್ಟ್ ಡಿಪಾರ್ಟ್‌ಮೆಂಟ್ ಪಾರ್ಕಿಂಗ್ (ಎಸ್.ಡಿ ರಸ್ತೆ ಜಂಕ್ಷನ್).
- ಸಾರ್ವಜನಿಕರಿಗೆ- ಸರ್ ಎಸ್.ಎಂ.ವಿ, ಕಾಲೇಜು ಮೈದಾನ, HAL ಬಸ್ ಯಾರ್ಡ್
ಬೆಳಗ್ಗೆ 9 ರಿಂದ ಮಧ್ಯಾಹ್ನ 3ರೆಗೆ ನೈಸ್ ರಸ್ತೆಯಲ್ಲಿಯೂ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಈ ಮಾರ್ಗವಾಗಿ ಬರುವವರಿಗೆ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.
ಪರ್ಯಾಯ ಮಾರ್ಗ :
ತುಮಕೂರು ರಸ್ತೆಯಿಂದ ಕನಕಪುರ ರಸ್ತೆ : ತುಮಕೂರು ರಸ್ತೆಯಿಂದ ನೈಸ್ ರೋಡ್ ಮೂಲಕ ಕನಕಪುರ ರಸ್ತೆ ಕಡೆ ತೆರಳುವ ವಾಹನ ಸವಾರರು ಸಿಎಂಟಿಐ ಜಂಕ್ಷನ್ ಬಳಿ ಬಲ ತಿರುವು ಪಡೆದು ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ತೆರಳಬೇಕು. ತುಮಕೂರು ರಸ್ತೆಯಲ್ಲಿ ನಗರದ ಒಳಭಾಗದಿಂದ ಬಂದು ನೈಸ್ ರೋಡ್ ಮೂಲಕ ಕನಕಪುರ ರಸ್ತೆ ಕಡೆ ತೆರಳುವವರೂ ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ ಮೂಲಕವೇ ಸಾಗಬೇಕಿದೆ.
ಇದನ್ನೂ ಓದಿ : ಫೆಡರಲ್ ಬ್ಯಾಂಕ್‌ನಲ್ಲಿ ಹಲವು ಹುದ್ದೆಗಳು ಖಾಲಿ : ಲಿಖಿತ ಪರೀಕ್ಷೆ ಇಲ್ಲದೆ ಸಂದರ್ಶನ ಮೂಲಕ ನೇಮಕಾತಿ


















