ಯಾದಗಿರಿ : ಜಿಲ್ಲೆಯಲ್ಲಿ ಇನ್ಸ್‌ಪೆಕ್ಟರ್ (CPI) ಒಬ್ಬರು ಬರೋಬ್ಬರಿ ಒಂದು ಲಕ್ಷ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಗುರುಮಠಕಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿ ಕ್ರಿಮಿನಲ್ ಪ್ರಕರಣವೊಂದರ ಆರೋಪಿಗಳನ್ನು ಬಂಧಿಸಲು ಹಣಕ್ಕೆ ಬೇಡಿಕೆಯಿಟ್ಟಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ.
ಪ್ರಕರಣವೊಂದರಲ್ಲಿ ಆರೋಪಿಗಳನ್ನು ಬಂಧಿಸಲು ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿ ಅವರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆನಂದ್ ಎಂಬವರು ದೂರು ನೀಡಿದ್ದರು. ಪ್ರಕರಣದ ಇತ್ಯರ್ಥಕ್ಕಾಗಿ ಒಟ್ಟು ಒಂದು ಲಕ್ಷ ರೂಪಾಯಿ ಹಣವನ್ನು ಪಡೆಯುವ ಒಪ್ಪಂದವಾಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗುರುಮಠಕಲ್‌ನ ಪೊಲೀಸ್ ವಸತಿ ಗೃಹದಲ್ಲಿ ನಿನ್ನೆ ರಾತ್ರಿ ಆನಂದ್ ಅವರಿಂದ ಒಂದು ಲಕ್ಷ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸಿದ್ದಾರೆ. ಲಂಚದ ಹಣದೊಂದಿಗೆ ಇನ್ಸ್‌ಪೆಕ್ಟರ್ ವೀರಣ್ಣ ಬಲೆಗೆ ಬೀಳಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ಜೆ.ಹೆಚ್ ಇನಾಂದಾರ್, ಪಿಐ ಸಿದ್ದರಾಯ ಬೆಳ್ಳೂರಗಿ ಅವರ ನೇತೃತ್ವದ ತಂಡ ಈ ದಾಳಿಯನ್ನು ನಡೆಸಿದೆ. ಸದ್ಯ ಆರೋಪಿ ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿಯನ್ನು ವಶಕ್ಕೆ ಪಡೆಯಲಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ರಾಜ್ಯ ಸರ್ಕಾರದ DHFWS ಸಂಸ್ಥೆಯಲ್ಲಿ 32 ಮೆಡಿಕಲ್ ಆಫೀಸರ್ ಹುದ್ದೆಗಳ ನೇಮಕಾತಿ : 1.3 ಲಕ್ಷ ರೂ. ಸಂಬಳ!



















