ಮೈಸೂರು : ಜಿಲ್ಲೆಯ ಕೆ.ಆರ್.ನಗರ ಪಟ್ಟಣದಲ್ಲಿ ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದ್ದು, ಚುಚ್ಚುಮದ್ದು ನೀಡಿದ ತಕ್ಷಣವೇ ರೋಗಿಯೊಬ್ಬರು ಮೃತಪಟ್ಟಿದ್ದಾರೆ ಎನ್ನುವ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಘಟನೆ ಬಳಿಕ ಮೃತ ವೃದ್ದನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕ್ಲಿನಿಕ್ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ರಾಮಯ್ಯ ಎಂಬ ವೃದ್ದ ರೋಗಿ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಕೆ.ಆರ್.ನಗರದ ರಾಘವೇಂದ್ರ ಕ್ಲಿನಿಕ್‌ಗೆ ಚಿಕಿತ್ಸೆಗಾಗಿ ಬಂದಿದ್ದರು. ಈ ವೇಳೆ ವೈದ್ಯರು ಪರೀಕ್ಷೆ ನಡೆಸಿ ಚುಚ್ಚುಮದ್ದು ನೀಡಿದ್ದರು. ಆದರೆ, ಇಂಜೆಕ್ಷನ್ ನೀಡಿದ ಕೆಲವೇ ಕ್ಷಣಗಳಲ್ಲಿ ರಾಮಯ್ಯ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.
ಚುಚ್ಚುಮದ್ದು ನೀಡಿದ ತಕ್ಷಣವೇ ರಾಮಯ್ಯ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯ ಹಾಗೂ ತಪ್ಪಾದ ಚಿಕಿತ್ಸೆ ಕಾರಣದಿಂದಲೇ ಈ ದುರ್ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕೂಡ ಕ್ಲಿನಿಕ್ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ರೋಗಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿದು ಸ್ಥಳೀಯ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ವೈದ್ಯಕೀಯ ನಿರ್ಲಕ್ಷ್ಯವೋ ಅಥವಾ ಬೇರೆ ಆರೋಗ್ಯ ಸಮಸ್ಯೆಯಿಂದ ಸಾವೋ ಸಂಭವಿಸಿದೆಯಾ ಎಂಬುದು ತನಿಖೆಯ ಬಳಿಕ ಸ್ಪಷ್ಟವಾಗಬೇಕಿದೆ.
ಇದನ್ನೂ ಓದಿ : ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಹೋದವರ ಚಿನ್ನಕ್ಕೆ ಕನ್ನ – ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ!



















