ಉಡುಪಿ : ಜಿಲ್ಲೆಯ ಮಟಪಾಡಿ ಗ್ರಾಮದಲ್ಲಿ ವರ್ಷಗಳ ಕನಸು ಕೊನೆಗೂ ನನಸಾಗಿದೆ. ಸುಮಾರು 25 ವರ್ಷಗಳಿಂದ ಸರ್ಕಾರಿ ಬಸ್ ಸೇವೆಗೆ ಬೇಡಿಕೆ ಇಟ್ಟಿದ್ದ ಗ್ರಾಮಸ್ಥರ ಆಶಯ ಇದೀಗ ಈಡೇರಿದ್ದು, ನೂತನ ಸರ್ಕಾರಿ ಸಾರಿಗೆ ಬಸ್ ಗ್ರಾಮಕ್ಕೆ ಆಗಮಿಸಿದ ಕ್ಷಣ ಸ್ಥಳೀಯರು ಭಾರೀ ಸಂಭ್ರಮಾಚರಣೆ ನಡೆಸಿದ್ದಾರೆ.
ಉಡುಪಿ–ಕೊಕ್ಕರ್ಣೆ ಮಾರ್ಗದಲ್ಲಿ ಬ್ರಹ್ಮಾವರ, ಮಟಪಾಡಿ ಹಾಗೂ ನೀಲಾವರ ಮೂಲಕ ಸಂಚರಿಸಲಿರುವ ನೂತನ ಸರ್ಕಾರಿ ಬಸ್ ಸೇವೆ ಆರಂಭವಾಗಿದೆ. ಹಲವು ವರ್ಷಗಳಿಂದ ಸಾರಿಗೆ ಸೌಲಭ್ಯ ಕೊರತೆಯಿಂದ ಬಳಲುತ್ತಿದ್ದ ಗ್ರಾಮಸ್ಥರಿಗೆ ಇದೀಗ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.
ಗ್ರಾಮಕ್ಕೆ ಮೊದಲ ಬಾರಿಗೆ ಸರ್ಕಾರಿ ಬಸ್ ಆಗಮಿಸುತ್ತಿದ್ದಂತೆ ಸ್ಥಳೀಯರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಫ್ರೆಂಡ್ಸ್ ಮಟಪಾಡಿ ಯೂಥ್ ಕ್ಲಬ್ ವತಿಯಿಂದ ಬಸ್‌ಗೆ ಹೂವಿನ ಹಾರ ಹಾಕಿ, ಆರತಿ ಬೆಳಗಿ, ತೆಂಗಿನಕಾಯಿ ಒಡೆದು ವಿಶೇಷ ಪೂಜೆ ನೆರವೇರಿಸಿದ್ದಾರೆ. ಬಸ್ ಸೇವೆ ಆರಂಭವಾದ ಖುಷಿಯಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಹಲವು ವರ್ಷಗಳ ಹೋರಾಟದ ಬಳಿಕ ಗ್ರಾಮಕ್ಕೆ ಸರ್ಕಾರಿ ಬಸ್ ಬಂದಿರುವುದು ಜನರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಈ ಹೊಸ ಬಸ್ ಸೇವೆಯಿಂದ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಗ್ರಾಮಸ್ಥರಿಗೆ ಸಂಚಾರದಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ವಿಶೇಷವಾಗಿ ಶಾಲೆ, ಕಾಲೇಜು ಹಾಗೂ ಆಸ್ಪತ್ರೆಗೆ ತೆರಳುವವರಿಗೆ ಇದು ದೊಡ್ಡ ಸಹಾಯವಾಗಲಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಭಾರತ ಟಿ20 ತಂಡಕ್ಕೆ ವೈಭವ್ ಸೂರ್ಯವಂಶಿ ಪದಾರ್ಪಣೆ? ಬೆಂಬಲಕ್ಕೆ ನಿಂತ ದಿಗ್ಗಜ ಇಯಾನ್ ಬಿಷಪ್!


















