ಬೆಂಗಳೂರು : ಪಶ್ಚಿಮ ನಗರ ಪಾಲಿಕೆಯಲ್ಲಿ ಸಾವಿರಾರು ಚದರ ಅಡಿ ವಿಸ್ತೀರ್ಣದ ಸ್ವತ್ತಿಗೆ ನಿಯಮ ಬಾಹಿರವಾಗಿ ‘A’ ಖಾತಾ ನೀಡಿರುವ ಕುರಿತು ಭಾರೀ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡಿನ ಮಲ್ಲಸಂದ್ರ ಗ್ರಾಮದ ಸ್ವತ್ತಿಗೆ ಸಂಬಂಧಿಸಿದಂತೆ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಮಲ್ಲಸಂದ್ರ ಗ್ರಾಮದ ಸರ್ವೆ ನಂ: 18/1A4, 18/1A5, 18/1A6, 18/1A7, 18/1A8 ಮತ್ತು 18/1A9ರ 10 ಎಕರೆ ಸ್ವತ್ತಿಗೆ M/s CASAGRAND LOTUS Pvt. Ltd. ಸಂಸ್ಥೆಯ ಹೆಸರಿಗೆ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ‘A’ ಖಾತಾ ಮಾಡಿಕೊಡಲಾಗಿದೆ. ಈ ಖಾತಾ ಪ್ರಕ್ರಿಯೆಗಾಗಿ 5 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಲಂಚ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಜಂಟಿ ಆಯುಕ್ತೆ ಆರತಿ ಆನಂದ್, ಉಪ ಆಯುಕ್ತ ಅಬ್ದುಲ್ ರಬ್, ಸಹಾಯಕ ಕಂದಾಯ ಅಧಿಕಾರಿ ರಮೇಶ್ ರಾಥೋಡ್ ಹಾಗೂ ಕಂದಾಯ ಪರಿವೀಕ್ಷಕ ಶಿವಕುಮಾರ್ ವಿರುದ್ಧ ಕಳೆದ ಫೆ.2 ರಂದು ಎನ್.ಆರ್ ರಮೇಶ್ ಅವರು ದೂರು ನೀಡಿದ್ದರು.

ದೂರು ದಾಖಲಾಗುತ್ತಿದ್ದಂತೆ ಮತ್ತು ಪಾಲಿಕೆ ಆಯುಕ್ತರ ಎಚ್ಚರಿಕೆಯ ಬಳಿಕ, ಈ ಹಿಂದೆ 4,21,577 ಚ. ಅಡಿ ವಿಸ್ತೀರ್ಣದ ಸ್ವತ್ತಿಗೆ ಮಾಡಲಾಗಿದ್ದ ‘A’ ಖಾತಾವನ್ನು ಜಂಟಿ ಆಯುಕ್ತೆ ಆರತಿ ಆನಂದ್ ರದ್ದುಪಡಿಸಿದ್ದರು ಎನ್ನಲಾಗಿದೆ. ಆದರೆ, ನಂತರ ಅದೇ ಸ್ವತ್ತಿಗೆ ಹೊಂದಿಕೊಂಡಿರುವ ಸರ್ವೆ ನಂ: 18/1A10, 18/1A11 ಮತ್ತು 18/1A12ರ 6,72,550 ಚ. ಅಡಿ ವಿಸ್ತೀರ್ಣದ ಸ್ವತ್ತನ್ನೂ ಸೇರಿಸಿ ಒಟ್ಟು 10,94,127 ಚ. ಅಡಿ ವಿಸ್ತೀರ್ಣಕ್ಕೆ ಮತ್ತೆ ‘A’ ಖಾತಾ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇಷ್ಟು ದೊಡ್ಡ ವಿಸ್ತೀರ್ಣದ ಸ್ವತ್ತಿಗೆ ‘A’ ಖಾತಾ ನೀಡುವ ಮುನ್ನ ಅಪರ ಆಯುಕ್ತ (ಕಂದಾಯ) ಮತ್ತು ಪಾಲಿಕೆ ಆಯುಕ್ತರ ಅನುಮೋದನೆ ಪಡೆಯುವುದು ಕಡ್ಡಾಯವಾಗಿದ್ದರೂ, ಯಾವುದೇ ಅನುಮೋದನೆ ಪಡೆಯದೆ ನೇರವಾಗಿ ಖಾತಾ ಮಾಡಿಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಪಾಲಿಕೆಗೆ ಬರಬೇಕಿದ್ದ ಕೋಟ್ಯಾಂತರ ರೂಪಾಯಿ ಅಭಿವೃದ್ಧಿ ಶುಲ್ಕ ಹಾಗೂ ಸುಧಾರಣಾ ಶುಲ್ಕ ವಂಚನೆಯಾಗಿದೆ ಎಂದು ಎನ್.ಆರ್ ರಮೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಏ.04 ರಂದು ನಿಯಮಬಾಹಿರವಾಗಿ ‘A’ ಖಾತಾ ಮಾಡಿಕೊಟ್ಟಿರುವ ಬಗ್ಗೆ ಆಘಾತಕಾರಿ ದಾಖಲೆಗಳು ಲಭ್ಯವಾಗಿದ್ದು, ಈ ಕಾರ್ಯಕ್ಕಾಗಿ ಅಧಿಕಾರಿಗಳು ಅಪಾರ ಪ್ರಮಾಣದ ಹಣ ಅಕ್ರಮವಾಗಿ ಪಡೆದಿದ್ದಾರೆ ಎನ್ನಲಾಗಿದೆ. ಜಂಟಿ ಆಯುಕ್ತೆ ಆರತಿ ಆನಂದ್ ಜೊತೆ ಉಪ ಆಯುಕ್ತ ಅಬ್ದುಲ್ ರಬ್ ಹಾಗೂ ಕಂದಾಯ ಪರಿವೀಕ್ಷಕ ಶಿವಕುಮಾರ್ ಕೂಡ ಷಾಮೀಲಾಗಿದ್ದಾರೆ ಎಂದು ದೂರಲಾಗಿದೆ.

ಈ ಹಿನ್ನೆಲೆ, ನಿಯಮಬಾಹಿರವಾಗಿ ಮಾಡಿರುವ 10,94,127 ಚ. ಅಡಿ ವಿಸ್ತೀರ್ಣದ ‘A’ ಖಾತಾವನ್ನು ತಕ್ಷಣ ರದ್ದುಪಡಿಸಬೇಕು ಹಾಗೂ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು GBA ಮುಖ್ಯ ಆಯುಕ್ತರು, GBA ಕಂದಾಯ ಇಲಾಖೆಯ ವಿಶೇಷ ಆಯುಕ್ತರು ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರಿಗೆ ಎನ್.ಆರ್ ರಮೇಶ್ ದೂರು ಸಲ್ಲಿಸಿದ್ದಾರೆ.
ಇನ್ನು, ಈ ಹಿಂದೆ ವಿವಿಧ ಇಲಾಖೆಗಳಲ್ಲಿ ಅಕ್ರಮ ಆರೋಪ ಎದುರಿಸಿರುವ ಮತ್ತು ಪ್ರಸ್ತುತ GBA ಯಲ್ಲಿ ಜಂಟಿ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಆರತಿ ಆನಂದ್ ಅವರನ್ನು ಸೇವೆಯಿಂದ ಶಾಶ್ವತವಾಗಿ ವಜಾಗೊಳಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಬೇಕು ಎಂದು ಎನ್.ಆರ್ ರಮೇಶ್ ಆಗ್ರಹಿಸಿದ್ಧಾರೆ. ಸದ್ಯ ಈ ಪ್ರಕರಣ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಗಂಡ ಮನೆಯಲ್ಲಿರುವಾಗಲೇ ನೇಣಿಗೆ ಶರಣಾದ ಪತ್ನಿ..!


















