ಹಾಸನ : ಪುಡಿ ರೌಡಿಯೊಬ್ಬ ಕುಡಿದು ಬಂದು ವೃದ್ಧನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಹಾಸನದ ಚಿಕ್ಕಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದವರನ್ನು ತಮ್ಮೇಗೌಡ (68) ಎಂದು ಗುರುತಿಸಲಾಗಿದೆ.
ಬೋರೇಗೌಡ ಅಲಿಯಾಸ್ ಲೋಕೇಶ್ (49) ಮಚ್ಚಿನಿಂದ ಮನಬಂದಂತೆ ಹಲ್ಲೆ ನಡೆಸಿದ ಪುಡಿ ರೌಡಿ ಎಂದು ಗೊತ್ತಾಗಿದೆ. ತಮ್ಮೇಗೌಡ ವ್ಯಾಪಾರ ಮಾಡಲು ತಮ್ಮ ತೋಟದಲ್ಲಿ ಎಳನೀರು ಕಡೆವಿಕೊಂಡು ಪತ್ನಿಯೊಂದಿಗೆ ಬರುತ್ತಿದ್ದರು. ಈ ವೇಳೆ ಎದುರಾದ ಬೋರೇಗೌಡ ಏಕಾಏಕಿ ಮಚ್ಚನ್ನು ಉಲ್ಟಾ ಮಾಡಿಕೊಂಡು ಥಳಿಸಿದ್ದಾನೆ. ಮಚ್ಚಿನಿಂದ ಹಲ್ಲೆ ನಡೆಸುವ ಭಯಾನಕ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.
ವೃದ್ಧ ನೆಲಕ್ಕೆ ಬಿದ್ದು ಬೇಡಿಕೊಂಡರು ಬಿಡದೆ ಲೋಕೇಶ್ ಹಲ್ಲೆ ನಡೆಸಿದ್ದಾನೆ. ಪತಿ ಮೇಲೆ ಹಲ್ಲೆ ಮಾಡುವುದನ್ನುಕಂಡು ತಮ್ಮೇಗೌಡರ ಪತ್ನಿ ಹೆದರಿ ಓಡಿ ಹೋಗಿದ್ದಾರೆ. ಹಲ್ಲೆ ನಡೆಸಿದ ನಂತರ ಡ್ಯಾನ್ಸ್ ಮಾಡುತ್ತಾ ವಿಕೃತಿ ಮೆರೆದಿರುವ ಬೋರೇಗೌಡ, ತಮ್ಮೇಗೌಡರ ಪತ್ನಿಯನ್ನು ಹಿಂಬಾಲಿಸಿಕೊಂಡು ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಅಷ್ಟರಲ್ಲಿ ವೃದ್ಧೆ ಓಡಿ ಹೋಗಿ ಮನೆಯ ಬಾಗಿಲು ಹಾಕಿಕೊಂಡಿದ್ದಾರೆ.
ಮನೆಯ ಕಿಟಕಿಗಳನ್ನು ಪುಡಿ ರೌಡಿ ಒಡೆದು ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಹಲ್ಲೆ ನಡೆಸುತ್ತಿದ್ದರೂ ಸ್ಥಳದಲ್ಲಿದ್ದವರು ಭಯದಿಂದ ತಡೆಯಲು ಮುಂದಾಗಿಲ್ಲ. ತಮ್ಮೇಗೌಡರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಸೋಲಿನ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆಗೆ ಎಂ.ಕೆ ಸ್ಟಾಲಿನ್ ರಾಜೀನಾಮೆ



















