ಚೆನ್ನೈ : ಭಾರತದ ‘ಲಾಟರಿ ಕಿಂಗ್’ ಎಂದೇ ಖ್ಯಾತರಾಗಿರುವ ಸ್ಯಾಂಟಿಯಾಗೊ ಮಾರ್ಟಿನ್ ಅವರ ಕುಟುಂಬವು ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ವಿಶೇಷವೆಂದರೆ, ಒಂದೇ ಕುಟುಂಬದ ಮೂವರು ಸದಸ್ಯರು ಬೇರೆ ಬೇರೆ ರಾಜಕೀಯ ಪಕ್ಷಗಳಿಂದ ಕಣಕ್ಕಿಳಿದು ವಿಜಯಶಾಲಿಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸ್ಯಾಂಟಿಯಾಗೊ ಮಾರ್ಟಿನ್ ಅವರ ಅಳಿಯ ಆಧವ್ ಅರ್ಜುನ್ ರೆಡ್ಡಿ ಅವರು ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಪ್ರಮುಖ ಕಾರ್ಯತಂತ್ರ ನಿರೂಪಕರಾಗಿ ಗುರುತಿಸಿಕೊಂಡಿದ್ದರು. ವಿಲ್ಲಿವಾಕ್ಕಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು, 17,302 ಮತಗಳ ಭಾರಿ ಅಂತರದಿಂದ ಜಯ ಸಾಧಿಸಿದ್ದಾರೆ. ಟಿವಿಕೆ ಪಕ್ಷದ ಚುನಾವಣಾ ವಿಜಯದ ಹಿಂದೆ ಜನರಲ್ ಸೆಕ್ರೆಟರಿಯಾಗಿದ್ದ ಆಧವ್ ಅವರ ಶ್ರಮ ಮಹತ್ವದ್ದಾಗಿದ್ದು, ಚೊಚ್ಚಲ ಪ್ರಯತ್ನದಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ತೀವ್ರ ಪೈಪೋಟಿಯಲ್ಲಿ ಗೆದ್ದ ಪತ್ನಿ ಲೀಮಾ ರೋಸ್
ಮಾರ್ಟಿನ್ ಅವರ ಪತ್ನಿ ಲೀಮಾ ರೋಸ್ ಮಾರ್ಟಿನ್ ಅವರು ಎಐಎಡಿಎಂಕೆ (AIADMK) ಟಿಕೆಟ್ ಮೇಲೆ ತಮಿಳುನಾಡಿನ ಲಾಲ್ಗುಡಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಇಲ್ಲಿ ಡಿಎಂಕೆ ಮತ್ತು ಟಿವಿಕೆ ಅಭ್ಯರ್ಥಿಗಳ ನಡುವೆ ತೀವ್ರ ತ್ರಿಕೋನ ಸ್ಪರ್ಧೆಯಿತ್ತು. ಅಂತಿಮವಾಗಿ ಅತ್ಯಂತ ಕಡಿಮೆ ಅಂತರದಲ್ಲಿ, ಅಂದರೆ ಸುಮಾರು 2,500 ಮತಗಳಿಂದ ಜಯಗಳಿಸುವ ಮೂಲಕ ಲೀಮಾ ರೋಸ್ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುದುಚೇರಿಯಲ್ಲಿ ಮಗನ ಹೊಸ ದಾಖಲೆ
ಇನ್ನು ಸ್ಯಾಂಟಿಯಾಗೊ ಮಾರ್ಟಿನ್ ಅವರ ಪುತ್ರ ಜೋಸ್ ಚಾರ್ಲ್ಸ್ ಮಾರ್ಟಿನ್ ಅವರು ನೆರೆಯ ಪುದುಚೇರಿಯಲ್ಲಿ ತಮ್ಮದೇ ಆದ ‘ಲಕ್ಷ್ಯ ಜನನಾಯಕ ಕಚ್ಚಿ’ ಎಂಬ ಹೊಸ ಪಕ್ಷವನ್ನು ಕಟ್ಟಿ ಗೆಲುವು ಸಾಧಿಸಿದ್ದಾರೆ. ಎನ್‌ಡಿಎ (NDA) ಮೈತ್ರಿಕೂಟದ ಭಾಗವಾಗಿ ಕಾಮರಾಜ್ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉದ್ಯಮಿ ಜೋಸ್ ಚಾರ್ಲ್ಸ್, 10,205 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದ್ದಾರೆ. ಈ ಮೂಲಕ ಮಾರ್ಟಿನ್ ಕುಟುಂಬವು ತಮಿಳುನಾಡು ಮತ್ತು ಪುದುಚೇರಿ ಎರಡೂ ರಾಜ್ಯಗಳಲ್ಲಿ ತನ್ನ ರಾಜಕೀಯ ಪ್ರಭಾವವನ್ನು ಸಾಬೀತುಪಡಿಸಿದೆ.
ಇದನ್ನೂ ಓದಿ : CSK ವಿರುದ್ಧದ ಕದನಕ್ಕೆ ಮುನ್ನ ಲುಂಗಿ ಎನ್ಗಿಡಿ ಆಗಮನ : ಡೆಲ್ಲಿ ಪಾಳಯದಲ್ಲಿ ಹೊಸ ಸಂಚಲನ!



















