ನವದೆಹಲಿ : ಆಮ್ ಆದ್ಮಿ ಪಕ್ಷವನ್ನು (AAP) ತೊರೆದು ಬಿಜೆಪಿಗೆ ಸೇರಿದ ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಅವರಿಗೆ ಈಗ ಬಂಧನದ ಭೀತಿ ಎದುರಾಗಿದೆ. ಪಂಜಾಬ್‌ನಲ್ಲಿ ಅವರ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಎರಡು ಎಫ್ಐಆರ್‌ಗಳು ದಾಖಲಾಗಿದ್ದು, ಶನಿವಾರ ಬೆಳಿಗ್ಗೆ ಅವರು ದೆಹಲಿಯ ತಮ್ಮ ಅಧಿಕೃತ ನಿವಾಸದಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಹಿಂಬಾಗಿಲಿನಿಂದ ಪರಾರಿಯಾದ ಸಂಸದ
ಬಂಧನ ಭೀತಿ ಹಿನ್ನೆಲೆಯಲ್ಲಿ ಸಂದೀಪ್ ಪಾಠಕ್ ಅವರ ದೆಹಲಿ ನಿವಾಸದ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೆ, ಪಾಠಕ್ ಅವರು ತಮ್ಮ ಮನೆಯ ಹಿಂಬಾಗಿಲಿನ ಮೂಲಕ ಕಾರಿನಲ್ಲಿ ತೆರಳುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಲಭ್ಯವಾಗಿವೆ. ಮೂಲಗಳ ಪ್ರಕಾರ, ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಬಿಜೆಪಿ ಕಾನೂನು ಘಟಕವು ಅವರಿಗೆ ಕಾನೂನು ರಕ್ಷಣೆ ಒದಗಿಸಲು ಸಿದ್ಧತೆ ನಡೆಸುತ್ತಿದೆ. ಇತ್ತೀಚೆಗಷ್ಟೇ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ತನ್ನ ಸಿದ್ಧಾಂತಗಳಿಂದ ದೂರ ಸರಿಯುತ್ತಿದೆ ಎಂದು ಆರೋಪಿಸಿ ಆಪ್‌ನ ಏಳು ಸಂಸದರು ಬಿಜೆಪಿಗೆ ಜಿಗಿದಿದ್ದರು. ಆ ಪೈಕಿ ಪಾಠಕ್ ಕೂಡ ಒಬ್ಬರು.
ಸಂದೀಪ್ ಪಾಠಕ್ ಸೇರಿದಂತೆ ರಾಘವ್ ಚಡ್ಡಾ, ಹರ್ಭಜನ್ ಸಿಂಗ್ ಮತ್ತು ಸ್ವಾತಿ ಮಲಿವಾಲ್ ಅವರಂತಹ ಪ್ರಭಾವಿ ಸಂಸದರು ಪಕ್ಷಾಂತರ ಮಾಡಿರುವುದು ಆಪ್ ಪಾಳಯದಲ್ಲಿ ತಲ್ಲಣ ಮೂಡಿಸಿದೆ. ಈ ಬೆಳವಣಿಗೆಯನ್ನು “ಜನಾದೇಶಕ್ಕೆ ಬಗೆದ ದ್ರೋಹ” ಎಂದು ಕರೆದಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್, ಈ ಅಕ್ರಮ ಪಕ್ಷಾಂತರದ ಕುರಿತು ಮೇ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ದೂರು ನೀಡಲು ನಿರ್ಧರಿಸಿದ್ದಾರೆ. ಏಳು ಸಂಸದರು ಒಟ್ಟಾಗಿ ಪಕ್ಷ ತೊರೆದಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆಯಡಿ ಇವರು ಅನರ್ಹಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಸಂಸದರ ರಾಜೀನಾಮೆಯಿಂದ ಪಂಜಾಬ್ ಸರ್ಕಾರಕ್ಕೆ ಸಂಕಷ್ಟ ಎದುರಾಗಬಹುದು ಎಂಬ ಊಹಾಪೋಹಗಳ ನಡುವೆ, ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆಲ್ಲುವ ಮೂಲಕ ತಮ್ಮ ಬಲ ಪ್ರದರ್ಶಿಸಿದ್ದಾರೆ. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಆಪ್ 94 ಶಾಸಕರನ್ನು ಹೊಂದಿದ್ದು, ಬಹುಮತಕ್ಕೆ ಯಾವುದೇ ಧಕ್ಕೆ ಉಂಟಾಗಿಲ್ಲ. 2027ರ ಚುನಾವಣೆಯಲ್ಲಿ ಜನತೆ ಬಂಡಾಯಗಾರರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಅಂಜನಾದ್ರಿ ಹನುಮನ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನ ಪಲ್ಟಿ – ಓರ್ವ ಸಾವು, ಇಬ್ಬರು ಗಂಭೀರ!



















