ಬೆಂಗಳೂರು : ನಗರದಲ್ಲಿ ನಿರಂತರ ಮಳೆ ಹಿನ್ನೆಲೆ ಅಪಾಯಕಾರಿಯಾಗಿ ಮಾರ್ಪಟ್ಟಿರುವ ಕಾಂಪೌಂಡ್ ಗೋಡೆಗಳು ಹಾಗೂ ಶಿಥಿಲ ಕಟ್ಟಡಗಳನ್ನು ತಕ್ಷಣ ಗುರುತಿಸಿ ತೆರವುಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದ್ದು, ಇತ್ತೀಚಿನ ಗಾಳಿ-ಮಳೆಯ ಪರಿಣಾಮವಾಗಿ ಅನೇಕ ಕಡೆ ಮರಗಳು, ಕೊಂಬೆಗಳು ಮುರಿದು ರಸ್ತೆಗಳಿಗೆ ಬಿದ್ದಿರುವುದು ಹಾಗೂ ಕಟ್ಟಡಗಳ ಸ್ಥಿತಿ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ.
ಬೋರಿಂಗ್ ಆಸ್ಪತ್ರೆ ಗೋಡೆ ಕುಸಿತದಲ್ಲಿ 7 ಮಂದಿ ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬೀಳುವ ಹಂತದಲ್ಲಿರುವ ಮರಗಳು, ಕೊಂಬೆಗಳು, ಗೋಡೆಗಳು ಹಾಗೂ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸಲು ಸೂಚಿಸಲಾಗಿದೆ.
ವಿಶೇಷ ತಂಡಗಳ ರಚನೆ:
ನಗರದ ಐದು ಪಾಲಿಕೆಗಳಲ್ಲಿ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಪಾಲಿಕೆ ಸಿಬ್ಬಂದಿಯನ್ನು ಒಳಗೊಂಡಂತೆ ವಿಶೇಷ ತಂಡಗಳನ್ನು ರಚಿಸಿ, ಹೆಚ್ಚಿನ ಮಳೆಯ ಸಾಧ್ಯತೆ ಹಿನ್ನೆಲೆ ತುರ್ತು ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಶಿಥಿಲ ಗೋಡೆಗಳ ತೆರವು ಕಾರ್ಯಾಚರಣೆ:
ಕೇಂದ್ರ ಪಾಲಿಕೆಯ ಬಿನ್ನಿಮಿಲ್ ರಸ್ತೆಯಲ್ಲಿ ಶಿಥಿಲಗೊಂಡಿದ್ದ ಸುಮಾರು 300 ಮೀಟರ್ ಉದ್ದದ 25 ಅಡಿ ಎತ್ತರದ ಗೋಡೆ ನೆಲಸಮಗೊಳಿಸಲಾಗಿದ್ದು, ಇನ್ನೂ 100 ಮೀಟರ್ ಗೋಡೆ ತೆರವು ಕಾರ್ಯ ಪ್ರಗತಿಯಲ್ಲಿದೆ. ಇದೇ ವೇಳೆ, ಮಲ್ಲೇಶ್ವರದ ಮೈಸೂರು ಲ್ಯಾಂಪ್ಸ್ ಪ್ರದೇಶದಲ್ಲಿ 240 ಮೀಟರ್ ಉದ್ದದ ಅಪಾಯಕರ ಕಾಂಪೌಂಡ್ ಗೋಡೆಯನ್ನೂ ಯಶಸ್ವಿಯಾಗಿ ತೆರವುಗೊಳಿಸಲಾಗಿದೆ.
ಇದನ್ನೂ ಓದಿ : GBAಯಲ್ಲಿ ಕಾನೂನು ಉಲ್ಲಂಘಿಸಿ ಹುದ್ದೆಗೆ ವ್ಯಕ್ತಿಯ ನಿಯೋಜನೆ – ಕಠಿಣ ಕ್ರಮಕ್ಕೆ ಎನ್.ಆರ್ ರಮೇಶ್ ಆಗ್ರಹ!



















