ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ (GBA) ಕೆಲ ಅಧಿಕಾರಿಗಳು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮಾಡಬಾರದ ಕಾನೂನು ಬಾಹಿರ ಕಾರ್ಯಗಳನ್ನು ಮಾಡುತ್ತಿರುವುದು ಎಗ್ಗಿಲ್ಲದೆ ನಡೆದುಕೊಂಡು ಬರುತ್ತಿದೆ. ಈಗ ಅಂತಹದೇ ಮತ್ತೊಂದು ಕಾನೂನು ಬಾಹಿರ ಕಾರ್ಯವನ್ನು ರಾಜಾರೋಷವಾಗಿ ಮಾಡಿರುವ ಬಗ್ಗೆ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ದಾಖಲೆ ಸಮೇತ ಬಹಿರಂಗಪಡಿಸಿದ್ದಾರೆ.
ವ್ಯವಸ್ಥಾಪಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರನ್ನು ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಅಕ್ರಮವಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರ ಹುದ್ದೆಯಲ್ಲಿ ನಿಯೋಜಿಸಿರುವ ಕಾನೂನು ಬಾಹಿರ ಕಾರ್ಯದ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಎನ್.ಆರ್ ರಮೇಶ್ ದೂರು ನೀಡಿದ್ದಾರೆ.

“ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಗಣಿ – 1)”ರಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ “ಬಿ. ಆರ್. ನಟರಾಜು”ಎಂಬ ಅಧಿಕಾರಿಯನ್ನು “ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ”ಸಂಸ್ಥೆಯ “ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ”ರ ಹುದ್ದೆಗೆ ನಿಯೋಜನೆ ಮಾಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಲೆಕ್ಕ ಪುಸ್ತಕಗಳ ನಿರ್ವಹಣೆ ಕಾರ್ಯ ಮಾಡಬೇಕಿರುವ ಗುಮಾಸ್ತ ಹುದ್ದೆಯ ಮುಂಬಡ್ತಿಯ ಭಾಗವಾದ ವ್ಯವಸ್ಥಾಪಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಆರ್. ನಟರಾಜು ಸಹಾಯಕ ಕಾರ್ಯಪಾಲಕ ಅಭಿಯಂತರರ ಹುದ್ದೆಯಂತಹ ತಾಂತ್ರಿಕ ನೈಪುಣ್ಯತೆಯನ್ನು ಪಡೆದಿರಲೇಬೇಕಾದ ಹುದ್ದೆಗೆ ನಿಯೋಜನೆ ಮಾಡಿರುವುದು ಎಷ್ಟು ಸಮಂಜಸ? ಎಂದು GBA ಹಾಗೂ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಎನ್.ಆರ್ ರಮೇಶ್ ಪ್ರಶ್ನಿಸಿದ್ದಾರೆ.

ಅದರಲ್ಲೂ ಕರಿಗೌಡ ಎಂಬ ಅತ್ಯಂತ ಭ್ರಷ್ಟಾತಿ ಭ್ರಷ್ಟ IAS ಶ್ರೇಣಿಯ ಅಧಿಕಾರಿ BSWMLನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ (CEO) ಆಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಸುತ್ತಮುತ್ತಲಿನ ಬಹುತೇಕ ಆಯಕಟ್ಟಿನ ಸ್ಥಳಗಳಲ್ಲಿ ಕೇವಲ ತಮ್ಮ ಸಮುದಾಯಕ್ಕೆ ಸೇರಿದ ಅಧಿಕಾರಿ – ನೌಕರರನ್ನೇ ನಿಯೋಜಿಸಿಕೊಂಡು ಅಸಹ್ಯವೆನಿಸುವಷ್ಟು ಸ್ವಜಾತಿ ಪ್ರೇಮದಿಂದ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಈಗಾಗಲೇ ಹಲವಾರು ದೂರುಗಳು ದಾಖಲಾಗಿವೆ. ಇಂತಹ ಸಂದರ್ಭದಲ್ಲಿ ತಾಂತ್ರಿಕ ಜ್ಞಾನ ಬಹಳಷ್ಟು ಅವಶ್ಯಕತೆ ಇರುವ Assistant Executive Engineer (AEE) ಹುದ್ದೆಯಲ್ಲಿ ತಾಂತ್ರಿಕ ಪರಿಣತೆಯ ಕವಡೆ ಕಾಸಿನಷ್ಟೂ ಜ್ಞಾನವಿಲ್ಲದ ಗುಮಾಸ್ತ ಹುದ್ದೆಯ ಮುಂದುವರೆದ ಭಾಗವಾದ ವ್ಯವಸ್ಥಾಪಕರ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯನ್ನು ನಿಯೋಜಿಸಿರುವ ಹಿಂದೆ ನಡೆದಿರಬಹುದಾದ ಭ್ರಷ್ಟಾಚಾರವನ್ನು ಎಂತಹ ಮೂರ್ಖನಾದರೂ ಸಹ ಊಹಿಸಿಕೊಳ್ಳಬಹು.
BSWMLನ CEO ಕರಿಗೌಡ ಮತ್ತು CGM ರಾಜೇಶ್ S. V. ಅವರ “ಸ್ವಂತ ಉದ್ದಿಮೆ”ಯಂತಾಗಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದಲ್ಲಿ ಈಗ ಮಿತಿಯಿಲ್ಲದ ಭ್ರಷ್ಟಾಚಾರ ಪ್ರಕರಣಗಳು ಮತ್ತು ಕಾನೂನು ಬಾಹಿರ ಕಾರ್ಯಗಳು ಪ್ರತೀ ನಿತ್ಯ ರಾಜಾರೋಷವಾಗಿ ನಡೆಯುತ್ತಿದ್ದರೂ ಸಹ GBA ಹಾಗೂ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಎನ್.ಆರ್ ರಮೇಶ್ ಆರೋಪಿಸದ್ದಾರೆ.
ಹೀಗಾಗಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ವ್ಯವಸ್ಥಾಪಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಆರ್. ನಟರಾಜು ಎಂಬ ವ್ಯಕ್ತಿಯನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರ ಹುದ್ದೆಗೆ ನಿಯೋಜಿಸಿರುವ ಕಾನೂನು ಬಾಹಿರ ಆದೇಶವನ್ನು ಕೂಡಲೇ ಹಿಂಪಡೆದು, ಅವರನ್ನು ಅವರ ಮಾತೃ ಇಲಾಖೆಗೆ ವಾಪಸ್ಸು ಕಳುಹಿಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಎನ್.ಆರ್ ರಮೇಶ್ ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಬೇಕಾಗುತ್ತದೆ ಎಚ್ಚರಿಕೆಯನ್ನೂ ಎನ್.ಆರ್ ರಮೇಶ್ ನೀಡಿದ್ದಾರೆ.
ಇದನ್ನೂ ಓದಿ : ರಾಜ್ಯ ಸರ್ಕಾರದ SPLOCA ಸಂಸ್ಥೆಯಲ್ಲಿ ಅಕೌಂಟಂಟ್ ಹುದ್ದೆಯ ನೇಮಕಾತಿ : 60 ಸಾವಿರ ರೂ. ಸ್ಯಾಲರಿ



















