ಬೆಂಗಳೂರು : ನಗರದಲ್ಲಿರುವ ಪ್ರಸಿದ್ಧ ರಿಯಲ್ ಎಸ್ಟೇಟ್ ಸಂಸ್ಥೆಯೊಂದರಿಂದ ಕೋಟಿ ಕೋಟಿ ವಂಚನೆ ನಡೆದಿರುವ ಆರೋಪ ಬೆಳಕಿಗೆ ಬಂದಿದೆ. ಲೇಔಟ್ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಹೇಳಿ ಹಣ ಪಡೆದು, ಬಳಿಕ ಭೂಮಿಯನ್ನು ಅಕ್ರಮವಾಗಿ ಬೇರೆವರಿಗೆ ಮಾರಾಟ ಮಾಡಿದ ಗಂಭೀರ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಒಟ್ಟು ಸುಮಾರು 3.2 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ನಡೆದಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಶ್ರೀ ನಂದಿ ಬಿಲ್ಡರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಅದರ ಮಾಲೀಕ ಎಂ.ಬಿ ಬಸವರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಬಸವರಾಜ್ ಸೇರಿದಂತೆ ಒಟ್ಟು 10 ಮಂದಿಯ ವಿರುದ್ಧ ವಿವಿಧ ಆರೋಪಗಳಡಿ ಕೇಸ್ ದಾಖಲಾಗಿದೆ.
ಆರ್ಮಿ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಗೆ ಲೇಔಟ್ ಅಭಿವೃದ್ಧಿ ಮಾಡಿಕೊಡುತ್ತೇವೆ ಎಂದು ಹೇಳಿ ಕೋಟಿ ಕೋಟಿ ಹಣ ಪಡೆದು ಮೋಸ ಮಾಡಲಾಗಿದೆ ಎಂಬ ಆರೋಪ ಇದೆ. ಆನೇಕಲ್ ತಾಲೂಕು ಜಿಗಣಿ ಹೋಬಳಿ ರಾಜಪುರ ಗ್ರಾಮದ ಸರ್ವೆ ನಂಬರ್ 38 ರಲ್ಲಿದ್ದ ಜಾಗವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ತೆಗೆದುಕೊಂಡು ಬಳಿಕ ಅಕ್ರಮವಾಗಿ ಮಾರಾಟ ಮಾಡಿರುವುದಾಗಿ ದೂರು ಸಲ್ಲಿಸಲಾಗಿದೆ.
ಈ ಪ್ರಕರಣದಲ್ಲಿ ನಂದಿ ಡೆವೆಲಪರ್ಸ್ ನಿರ್ದೇಶಕರಾದ ಹೇಮಾ, ರೇಖಾ, ಬಸವನಗೌಡ, ಎಸ್.ಸಿ ಕುಲಕರ್ಣಿ ಸೇರಿದಂತೆ ಹಲವರ ಹೆಸರು ಕೇಳಿಬಂದಿದೆ. ಜೊತೆಗೆ ಆರ್ಮಿ ಹೌಸಿಂಗ್ ಸೊಸೈಟಿಯ ನಿರ್ದೇಶಕರಾದ ಕೆ.ಸಿ ದೇವಯ್ಯ, ವಸಂತಕುಮಾರ್, ಎಂ ಶಿವರಾಂ, ಡಿಪಿ ಸಿಂಗ್, ಅನಿಲ್ ಜೋಸೆಫ್ ಅವರ ಮೇಲೂ ಅಧಿಕಾರ ದುರುಪಯೋಗ ಹಾಗೂ ಹಣ ದುರುಪಯೋಗದ ಆರೋಪ ಕೇಳಿಬಂದಿದೆ.
ಸೊಸೈಟಿಯ ಒಟ್ಟು 123 ಸದಸ್ಯರು ಭೂಮಿ ಅಭಿವೃದ್ಧಿಗಾಗಿ ಹಣ ಹೂಡಿಕೆ ಮಾಡಿದ್ದು, ಪ್ರತಿ ಸದಸ್ಯರಿಂದ ಐವತ್ತು ಸಾವಿರದಿಂದ ಎಂಟು ಲಕ್ಷ ರೂಪಾಯಿವರೆಗೆ ಹಣ ಸಂಗ್ರಹಿಸಲಾಗಿತ್ತು. ಆದರೆ ಒಟ್ಟು 3.61 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆಗೊಂಡಿರುವುದಾಗಿ ದೂರು ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ 120ಬಿ, 403, 406, 420 ಸೇರಿದಂತೆ ಒಟ್ಟು 12 ಸೆಕ್ಷನ್‌ಗಳಡಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಸೇರಿ 15 ಜಿಲ್ಲೆಗೆ ಯೆಲ್ಲೋ ಅಲರ್ಟ್ : ಇಂದು ವ್ಯಾಪಕ ಮಳೆ ಸಾಧ್ಯತೆ!



















