ಕೊಪ್ಪಳ : ಗಂಗಾವತಿ ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್ಎನ್ ವೆಂಕಿ ಕೊಲೆ ಪ್ರಕರಣದ ಆರು ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜೊತೆ ದಂಡ ವಿಧಿಸಲಾಗಿದೆ.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಗಂಗಾವತಿ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ, ಆರು ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ ಇಂದು (ಎಪ್ರಿಲ್ 30) ಆದೇಶ ಹೊರಡಿಸಿದ್ದಾರೆ.
ಇದರ ಜೊತೆಗೆ ಆರು ಜನರಿಗೆ ತಲಾ ಮೂರು ಲಕ್ಷ ದಂಡ ವಿಧಿಸಿದ್ದಾರೆ. ರವಿ , ವಿಜಯ್ ಅಲಿಯಾದ್ ಮೈಲಾರಿ, ಧನರಾಜ್, ಭೀಮ್ ಅಲಿಯಾದ್ ಭರತ್, ಸಲೀಮ್ ಮಹಮ್ಮದ್ ರಫೀಕ್, ಗಂಗಾಧರ ಗೌಳಿಗೆ ಗಲ್ಲು ಶಿಕ್ಷೆಗೆ ಗುರಿಯಾದವರು.
ಪ್ರಕರಣದ ಹಿನ್ನೆಲೆ
ಗಂಗಾವತಿ ನಗರದ ಹೊರ ವಲಯದಲ್ಲಿರುವ ರಾಣಾ ಪ್ರತಾಪ್ ಸಿಂಗ್ ವೃತ್ತದಲ್ಲಿರುವ ಖಾಸಗಿ ಆಸ್ಪತ್ರೆಯ ಬಳಿ 2025ರ ಅಕ್ಟೋಬರ್ 8ರ ಮಧ್ಯರಾತ್ರಿ ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ (32) ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ದರು.
ಅ.8ರ ತಡರಾತ್ರಿ ಊಟ ಮುಗಿಸಿಕೊಂಡು ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ವೆಂಕಟೇಶ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಹಿಂಬಾಲಿಸಿದ ಯುವಕರ ಗುಂಪು, ದ್ವಿಚಕ್ರ ವಾಹನಕ್ಕೆ ಗುದ್ದಿ ಬೀಳಿಸಿದ್ದರು. ಬಳಿಕ ಕೆಳಕ್ಕೆ ಬಿದ್ದ ವೆಂಕಟೇಶನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮನಬದಂತೆ ಕೊಚ್ಚಿ ಕೊಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೆಂಕಟೇಶನನ್ನು ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಮಧ್ಯರಾತ್ರಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ಕೊಲೆ ಕೇಸ್ ಗೆ ಸಂಭಂದಿಸಿದಂತೆ ಗಂಗಾವತಿ ನಗರ ಪೊಲೀಸರು, 12 ಜನರನ್ನು ಬಂಧಿಸಿದ್ದು, ಸುಮಾರು 927 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹಳೆಯ ದ್ವೇಷ ಮತ್ತು ಮಾರುತಿ ಎಂಬ ವ್ಯಕ್ತಿಯ ಚಿಕಿತ್ಸೆಗೆ ನೆರವಾಗಿದ್ದು ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ : ಆಧಾರ್ ಕಾರ್ಡ್ ಜನ್ಮದಿನಾಂಕದ ಪ್ರೂಫ್ ಅಲ್ಲ : ಈ 5 ಕಡೆ ಉಪಯೋಗಕ್ಕೆ ಬರೋದಿಲ್ಲ


















