ಬೆಂಗಳೂರು : ಬ್ಯಾಂಕ್ ಖಾತೆ ತೆರೆಯಲು, ಹೊಸ ಸಿಮ್ ತೆಗೆದುಕೊಳ್ಳಲು, ಸರ್ಕಾರದ ಯೋಜನೆಗಳ ಲಾಭ ಪಡೆಯುವುದರಿಂದ ಹಿಡಿದು ಹತ್ತಾರು ಕಡೆ ಆಧಾರ್ ಕಾರ್ಡ್ ಅನ್ನು ಪ್ರಮುಖ ದಾಖಲೆಯನ್ನಾಗಿ ನೀಡುತ್ತೇವೆ. ಆದರೆ, ಹತ್ತಾರು ಕಡೆ ಉಪಯೋಗಕ್ಕೆ ಬರುವ ಆಧಾರ್ ಕಾರ್ಡ್ ಜನ್ಮದಿನಾಂಕದ ದಾಖಲೆ ಅಲ್ಲ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಸ್ಪಷ್ಟನೆ ನೀಡಿದೆ. ಹಾಗಾಗಿ, ಆಧಾರ್ ಕಾರ್ಡ್ ಇನ್ನುಮುಂದೆ ಹಲವೆಡೆ ಜನ್ಮದಿನಾಂಕದ ಪ್ರೂಫ್ ಆಗಿ ಬಳಸಲು ಆಗುವುದಿಲ್ಲ.
ಪ್ರಾಧಿಕಾರದ ಸ್ಪಷ್ಟನೆ ಪ್ರಕಾರ, ಆಧಾರ್ ಕಾರ್ಡ್ ನಿಮ್ಮ ಗುರುತಿನ ದಾಖಲೆಯೇ (ID Proof) ಹೊರತು, ವಯಸ್ಸಿನ ಪುರಾವೆ (Birth Proof) ಅಲ್ಲ. ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕವನ್ನು ಮುದ್ರಿಸಿದ್ದರೂ ಕಾನೂನುಬದ್ಧವಾಗಿ ಅದನ್ನು ಜನನ ಪ್ರಮಾಣಪತ್ರಕ್ಕೆ ಸಮಾನವೆಂದು ಪರಿಗಣಿಸಲಾಗುವುದಿಲ್ಲ. ವ್ಯಕ್ತಿಯ ಗುರುತನ್ನು (ಬಯೋಮೆಟ್ರಿಕ್ಸ್ ಮೂಲಕ) ಸಾಬೀತುಪಡಿಸುವುದೇ ಆಧಾರ್ ಕಾರ್ಡಿನ ಮುಖ್ಯ ಉದ್ದೇಶವಾಗಿದೆ. ಇದು ಜನರ ವಯಸ್ಸನ್ನು ದೃಢೀಕರಿಸುವುದಲ್ಲ ಎಂದು ಸ್ಪಷ್ಟಪಡಿಸಿದೆ.
5 ಕಡೆ ಆಧಾರ್ ಪ್ರಮುಖ ದಾಖಲೆ ಅಲ್ಲ
• ಹೊಸ ಕಂಪನಿ ಸೇರುವಾಗ ಅಲ್ಲಿ ಜನ್ಮದಿನಾಂಕದ ಪರಿಶೀಲನೆಗೆ ಆಧಾರ್ ಬಳಕೆ ಆಗಲ್ಲ
• ವಯಸ್ಸಿನ ಆಧಾರದ ಮೇಲೆ ಹಣ ಸಿಗುವ ಪಿಂಚಣಿ ಮತ್ತು ಸರ್ಕಾರಿ ಯೋಜನೆಗಳಿಗೆ ಪ್ರಮುಖ ದಾಖಲೆ ಅಲ್ಲ.
• ಪಾಸ್ ಪೋರ್ಟ್ ಪಡೆಯಲು ಇನ್ನುಮುಂದೆ ಶಾಲಾ ಪ್ರಮಾಣಪತ್ರ ಅಥವಾ ಜನನ ಪ್ರಮಾಣಪತ್ರ ನೀಡುವುದು ಕಡ್ಡಾಯ.
• ಯಾವುದೇ ವಿಮಾ ಪಾಲಿಸಿಯ ಪ್ರೀಮಿಯಂ ನಿರ್ಧರಿಸಲು ವಯಸ್ಸಿನ ದೃಢೀಕೃತ ದಾಖಲೆ ಬೇಕಾಗುತ್ತದೆ.
• ಯಾವುದೇ ಕೋರ್ಟ್-ಕಚೇರಿ ಅಥವಾ ಉಯಿಲು ಪತ್ರದಂತಹ ಕಾನೂನು ದಾಖಲೆಗಳಿಗಾಗಿ ಆಧಾರ್ ಕಾರ್ಡ್ ಅನ್ನು ಅಧಿಕೃತ ದಾಖಲೆ ಎಂಬುದಾಗಿ ಬಳಸಲು ಆಗುವುದಿಲ್ಲ.
ಇದನ್ನೂ ಓದಿ : PSLನಲ್ಲಿ ಸ್ಟೀವ್ ಸ್ಮಿತ್ ಆಕ್ರೋಶ ; ಡ್ರೆಸ್ಸಿಂಗ್ ರೂಮ್‌ನಲ್ಲಿ ಆಸೀಸ್ ತಾರೆ ಸಿಡಿಮಿಡಿ.. ಲೀಗ್‌ಗೆ ಗುಡ್‌ಬೈ?



















