ಮುಂಬೈ : ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ 2026ರ ಆವೃತ್ತಿಯ ರೋಚಕ ಪಂದ್ಯಗಳು ನಡೆಯುತ್ತಿರುವ ಬೆನ್ನಲ್ಲೇ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರ ದಿಢೀರ್ ಭೇಟಿಯು ಕ್ರೀಡಾಭಿಮಾನಿಗಳಲ್ಲಿ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಏಪ್ರಿಲ್ 29ರಂದು ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆದ ಹೈ-ವೋಲ್ಟೇಜ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ವಿನೋದ್ ಕಾಂಬ್ಳಿ, ತಮ್ಮ ಅನಾರೋಗ್ಯದ ಕುರಿತು ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೂ ಒಂದೇ ಭೇಟಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಒಂದು ಕಾಲದಲ್ಲಿ ಇದೇ ಕ್ರೀಡಾಂಗಣದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸುತ್ತಿದ್ದ ಈ ಎಡಗೈ ಬ್ಯಾಟರ್, ಇದೀಗ ವೀಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕ್ರಿಕೆಟ್ ಮೇಲಿನ ತಮ್ಮ ಅಪಾರ ಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ದೈಹಿಕವಾಗಿ ಅಶಕ್ತ
ಅನಾರೋಗ್ಯದ ಕಾರಣದಿಂದಾಗಿ ದೈಹಿಕವಾಗಿ ಕೊಂಚ ಅಶಕ್ತರಾಗಿರುವ 54 ವರ್ಷದ ವಿನೋದ್ ಕಾಂಬ್ಳಿ, ಇಬ್ಬರು ಆಪ್ತರ ಸಹಾಯದಿಂದ ಕ್ರೀಡಾಂಗಣದ ಮೆಟ್ಟಿಲುಗಳನ್ನು ಇಳಿದು ಬರುವ ದೃಶ್ಯ ಅಭಿಮಾನಿಗಳ ಕಣ್ತುಂಬಿಸುವಂತಿತ್ತು. ಸರಳವಾದ ಬಿಳಿ ಬಣ್ಣದ ಚೆಕ್ಸ್ ಶರ್ಟ್ ಧರಿಸಿದ್ದ ಕಾಂಬ್ಳಿ ಅವರನ್ನು ಗುರುತಿಸಿದ ಕ್ರೀಡಾಭಿಮಾನಿಗಳು ತಕ್ಷಣವೇ ಅವರತ್ತ ಧಾವಿಸಿ, ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದರು.
ಗ್ಯಾಲರಿಯಿಂದ ಕೇಳಿಬಂದ ಅಭಿಮಾನಿಗಳ ಪ್ರೀತಿಗೆ ಸ್ಪಂದಿಸಿದ ಕಾಂಬ್ಳಿ, ನಗುಮೊಗದಿಂದಲೇ ಥಂಬ್ಸ್-ಅಪ್ (Thumbs-up) ತೋರಿಸಿ ಕೃತಜ್ಞತೆ ಸಲ್ಲಿಸಿದರು. ದೇಹ ದಣಿದಿದ್ದರೂ, ಕ್ರಿಕೆಟ್ ಹಾಗೂ ಅಭಿಮಾನಿಗಳೊಂದಿಗಿನ ಅವರ ನಂಟು ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದನ್ನು ಈ ಸಣ್ಣ ಭೇಟಿ ನಿರೂಪಿಸಿತು.
ಕಳೆದ ಕೆಲವು ದಿನಗಳಿಂದ ವಿನೋದ್ ಕಾಂಬ್ಳಿ ಅವರ ಆರೋಗ್ಯದ ಕುರಿತು ಅತ್ಯಂತ ಆತಂಕಕಾರಿ ಸುದ್ದಿಗಳು ಹರಿದಾಡುತ್ತಿದ್ದವು. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಅವರನ್ನು ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈ ಎಲ್ಲಾ ವರದಿಗಳನ್ನು ಅವರ ಪತ್ನಿ ಆಂಡ್ರಿಯಾ ಸಾರಾಸಗಟಾಗಿ ತಳ್ಳಿಹಾಕಿದ್ದರು. ಕಾಂಬ್ಳಿ ಅವರು ಆರೋಗ್ಯವಾಗಿದ್ದು, ಸುಳ್ಳು ಸುದ್ದಿಗಳನ್ನು ಯಾರು ಹಬ್ಬಿಸುತ್ತಿದ್ದಾರೋ ತಿಳಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ವಾಂಖೆಡೆ ಕ್ರೀಡಾಂಗಣದಲ್ಲಿ ಕಾಂಬ್ಳಿ ಖುದ್ದಾಗಿ ಕಾಣಿಸಿಕೊಳ್ಳುವ ಮೂಲಕ ಆಂಡ್ರಿಯಾ ಅವರ ಹೇಳಿಕೆಗೆ ಪುಷ್ಟಿ ನೀಡಿದ್ದು, ಕ್ರಿಕೆಟ್ ವಲಯದಲ್ಲಿ ಮನೆಮಾಡಿದ್ದ ಆತಂಕವನ್ನು ದೂರ ಮಾಡಿದ್ದಾರೆ.
ಸಚಿನ್ ಜತೆ ಹುಟ್ಟುಹಬ್ಬ ಆಚರಣೆ
ಇತ್ತೀಚೆಗಷ್ಟೇ ತಮ್ಮ ಬಾಲ್ಯದ ಸ್ನೇಹಿತ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 53ನೇ ಹುಟ್ಟುಹಬ್ಬದ ಪ್ರಯುಕ್ತ ಐಸ್‌ಕ್ರೀಮ್ ಬ್ರ್ಯಾಂಡ್ ಒಂದರ ಡಿಜಿಟಲ್ ಜಾಹೀರಾತಿನಲ್ಲೂ ಕಾಂಬ್ಳಿ ಕಾಣಿಸಿಕೊಂಡಿದ್ದರು. ಶಿವಾಜಿ ಪಾರ್ಕ್‌ನಲ್ಲಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಸಚಿನ್ ಹುಟ್ಟುಹಬ್ಬವನ್ನು ಅವರು ಸಂಭ್ರಮಿಸಿದ್ದರು. ವರದಿಗಳ ಪ್ರಕಾರ, ಕಾಂಬ್ಳಿ ಅವರ ಆಪ್ತ ಗೆಳೆಯ ಹಾಗೂ ಮುಂಬೈನ ಮಾಜಿ ಕ್ರಿಕೆಟಿಗ ಮಾರ್ಕಸ್ ಕೌಟೊ ನೇತೃತ್ವದಲ್ಲಿ ಮಾಜಿ ಆಟಗಾರರ ಗುಂಪೊಂದು ಅವರಿಗೆ ಭಾವನಾತ್ಮಕ ಹಾಗೂ ಆರ್ಥಿಕ ಬೆಂಬಲವನ್ನು ಒದಗಿಸುತ್ತಿದೆ. ಇದರ ಜೊತೆಗೆ, ಸ್ವತಃ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಬಾಲ್ಯದ ಗೆಳೆಯನ ಯೋಗಕ್ಷೇಮವನ್ನು ನಿರಂತರವಾಗಿ ಖುದ್ದಾಗಿ ವಿಚಾರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಎದುರಾಳಿ ತಂಡವನ್ನು ಬೆಂಬಲಿಸಿದ ಫ್ಯಾನ್ಸ್ ವಿರುದ್ಧ ಬೇಸರ ಹೊರಹಾಕಿದ ಪಾಂಡ್ಯ



















