ಬೆಂಗಳೂರು : ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ (Bank of Baroda) ಈಗ ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡಲು ಮುಂದಾಗಿದೆ. ಅದರಲ್ಲೂ ಬ್ಯಾಂಕ್ ಗಳಿಗೆ ಪದೇಪದೆ ಅಲೆದಾಡಲು ಆಗದ ಹಿರಿಯ ನಾಗರಿಕರಿಗಾಗಿಯೇ ಹೊಸ ಯೋಜನೆ ಘೋಷಿಸಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ತೆರೆಯುವ ಹಿರಿಯ ನಾಗರಿಕರಿಗೆ ಹಲವು ಸೌಲಭ್ಯಗಳು ದೊರೆಯಲಿವೆ.
ಹೌದು, ಬಿಒಬಿ ಸೀನಿಯರ್ ಸಿಟಿಜನ್ ವಿಶೇಷ ಸಮ್ಮಾನ್ ಎಂಬ ಯೋಜನೆ ಜಾರಿಗೊಳಿಸಲಾಗಿದೆ. ಇದರ ಅನ್ವಯ ಬ್ಯಾಂಕ್ ಆಫ್ ಬರೋಡಾದಲ್ಲಿ ಉಳಿತಾಯ ಖಾತೆ ತೆರೆದರೆ, ಅಂತಹ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಉಚಿತ ಬ್ಯಾಂಕಿಂಗ್ ಸೇವೆ ನೀಡಲಾಗುತ್ತದೆ. ಇದೊಂದು ಪ್ರೀಮಿಯಂ ಖಾತೆ ಯೋಜನೆಯಾಗಿದ್ದು, ಸೀಮಿತ ನಾಗರಿಕರಿಗೆ ಮಾತ್ರ ಸೇವೆ ದೊರೆಯಲಿದೆ.
ಅಂದರೆ, ಬ್ಯಾಂಕ್ ಖಾತೆಯಲ್ಲಿ ತಿಂಗಳಿಗೆ ಸರಾಸರಿ 1 ಲಕ್ಷ ರೂಪಾಯಿ ಠೇವಣಿ ಹೊಂದಿದವರಿಗೆ ವಿಶೇಷ ಸೌಲಭ್ಯಗಳು ದೊರೆಯಲಿವೆ. ಇವರಿಗೆ ತಿಂಗಳಿಗೆ ಎರಡು ಬಾರಿ ಮನೆ ಬಾಗಿಲಿಗೆ ಬ್ಯಾಂಕ್ ಸಿಬ್ಬಂದಿಯು ಸೇವೆ ನೀಡುತ್ತಾರೆ. ಹಾಗೆಯೇ, ಹಿರಿಯ ನಾಗರಿಕರಿಗೆ ಆನ್ ಲೈನ್ ಮೂಲಕ ಉಚಿತವಾಗಿ ಡಾಕ್ಟರ್ ಕನ್ಸಲ್ಟೇಷನ್ ಮಾಡಿಸಲಾಗುತ್ತದೆ.
ನುರಿತ ವೈದ್ಯರು ಖಾತೆ ಹೊಂದಿದವರು ಸೇರಿ ಕುಟುಂಬದ ಆರು ಸದಸ್ಯರಿಗೆ ಕನ್ಸಲ್ಟೇಷನ್ ಮಾಡಲಿದ್ದಾರೆ. ಅದೇ ರೀತಿ, ಆನ್ ಲೈನ್ ಮೂಲಕ ಔಷಧಿ ಖರೀದಿಸುವವರಿಗೆ ಶೇ.15ರಷ್ಟು ರಿಯಾಯಿತಿಯೂ ದೊರೆಯಲಿದೆ. ಇದರೊಂದಿಗೆ 60 ವರ್ಷ ದಾಟಿದ ನಾಗರಿಕರಿಗೆ ವಿಶೇಷ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಬ್ಯಾಂಕ್ ಆಫ್ ಬರೋಡಾ ಮುಂದಾಗಿದೆ.
ಇದನ್ನೂ ಓದಿ : ಉಡುಪಿ : ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಬಸ್ ಭೀಕರ ಅಪಘಾತ – ಇಬ್ಬರು ಸಾವು, ಹಲವರು ಗಂಭೀರ!



















