ನವದೆಹಲಿ : ಜೀವನಪೂರ್ತಿ ಉಳಿತಾಯ ಮಾಡಿದ್ದ ಹಣವನ್ನು ಕ್ಷಣಾಮಾತ್ರದಲ್ಲಿ ಲೂಟಿ ಮಾಡುವ, ಸಾರ್ವಜನಿಕರನ್ನು ಬೆಚ್ಚಿಬೀಳಿಸುತ್ತಿರುವ ‘ಡಿಜಿಟಲ್ ಅರೆಸ್ಟ್’ (Digital Arrest) ಪ್ರಕರಣಗಳನ್ನು ಬುಡಸಮೇತ ಕಿತ್ತುಹಾಕಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯಿಟ್ಟಿದೆ.
ವಂಚಕರ ಜಾಲವನ್ನು ಭೇದಿಸಲು ಬಹು-ಏಜೆನ್ಸಿಗಳ ಸಮನ್ವಯದೊಂದಿಗೆ ರೂಪಿಸಲಾಗಿರುವ ಸಮಗ್ರ ಕಾರ್ಯತಂತ್ರದ ವರದಿಯನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಸಿಮ್ ಕಾರ್ಡ್ ಖರೀದಿಗೆ ಬಯೋಮೆಟ್ರಿಕ್ ಕಡ್ಡಾಯಗೊಳಿಸುವುದು ಹಾಗೂ ಅನುಮಾನಾಸ್ಪದ ಬ್ಯಾಂಕ್ ಖಾತೆಗಳ ವಹಿವಾಟಿಗೆ ತಾತ್ಕಾಲಿಕ ತಡೆ ಒಡ್ಡುವಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಈ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಏನೇನು ಕ್ರಮಗಳು?
ಸೈಬರ್ ವಂಚನೆಗಳಲ್ಲಿ ಸಿಮ್ ಕಾರ್ಡ್‌ಗಳ ದುರ್ಬಳಕೆಯನ್ನು ತಡೆಯುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ಇದಕ್ಕಾಗಿ ಟೆಲಿಕಮ್ಯುನಿಕೇಶನ್ (ಬಳಕೆದಾರರ ಗುರುತಿಸುವಿಕೆ) ನಿಯಮಗಳನ್ನು ತ್ವರಿತವಾಗಿ ಜಾರಿಗೊಳಿಸಲು ಅಟಾರ್ನಿ ಜನರಲ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಸಿಮ್ ವಿತರಣೆಯ ರಾಷ್ಟ್ರೀಯ ಮಟ್ಟದ ಟ್ರ್ಯಾಕಿಂಗ್‌ಗಾಗಿ ‘ಬಯೋಮೆಟ್ರಿಕ್ ಐಡೆಂಟಿಟಿ ವೆರಿಫಿಕೇಶನ್ ಸಿಸ್ಟಮ್’ ಅನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ಸೂಚಿಸಲಾಗಿದೆ.
ಸಿಮ್ ಆಕ್ಟಿವೇಶನ್ ಮಾಡುವ ಪಾಯಿಂಟ್ ಆಫ್ ಸೇಲ್ (PoS) ಮಾರಾಟಗಾರರ ಹೊಣೆಗಾರಿಕೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಬಳಕೆಯಾಗುವ ಶಂಕಿತ ಸಿಮ್‌ಗಳನ್ನು ತಕ್ಷಣವೇ ಬ್ಲಾಕ್ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ, ತನಿಖಾ ಸಂಸ್ಥೆಗಳೊಂದಿಗೆ ಟೆಲಿಕಾಂ ಸಂಸ್ಥೆಗಳು ನೈಜ-ಸಮಯದ ಡೇಟಾವನ್ನು ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಡಿವೈಸ್ ಟ್ರ್ಯಾಕಿಂಗ್
ವಂಚಕರು ಹೆಚ್ಚಾಗಿ ವಾಟ್ಸ್ ಆ್ಯಪ್ ಸೇರಿದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಳ್ಳುತ್ತಿರುವುದರಿಂದ, ಈ ವೇದಿಕೆಗಳಿಗೂ ಕೇಂದ್ರವು ಮೂಗುದಾರ ಹಾಕಲು ಸಿದ್ಧತೆ ನಡೆಸಿದೆ. ದೀರ್ಘಕಾಲದ ಸ್ಕ್ಯಾಮ್ ಕರೆಗಳನ್ನು ಪತ್ತೆಹಚ್ಚಿ ನಿರ್ಬಂಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಹಾಗೂ ‘ಸಿಮ್-ಬೈಂಡಿಂಗ್’ (SIM-binding) ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ವಾಟ್ಸ್‌ಆ್ಯಪ್‌ಗೆ ಸೂಚಿಸಲಾಗಿದೆ. ವಂಚನೆಗೆ ಬಳಕೆಯಾದ ಡಿವೈಸ್ ಐಡಿಗಳನ್ನು ಬ್ಲಾಕ್ ಮಾಡುವ ಮೂಲಕ, ಅದೇ ವಂಚಕರು ಬೇರೆ ನಂಬರ್ ಬಳಸಿ ಹೊಸ ಖಾತೆ ತೆರೆಯುವುದನ್ನು ತಡೆಯಲು ಯೋಜನೆ ರೂಪಿಸಲಾಗಿದೆ. ಅಲ್ಲದೆ, ವಂಚಕರು ಡಿಲೀಟ್ ಮಾಡಿದ ಖಾತೆಗಳ ಡೇಟಾವನ್ನು ಕನಿಷ್ಠ 180 ದಿನಗಳವರೆಗೆ ಕಡ್ಡಾಯವಾಗಿ ಕಾಯ್ದಿರಿಸುವಂತೆ ವಾಟ್ಸ್‌ಆ್ಯಪ್‌ಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗಳು
ಸೈಬರ್ ವಂಚನೆಗಳ ಮೂಲಕ ಲೂಟಿಯಾದ ಹಣ ವರ್ಗಾವಣೆಯಾಗುವ ಶಂಕಿತ ಬ್ಯಾಂಕ್ ಖಾತೆಗಳ ಡೆಬಿಟ್ (ಹಣ ಹಿಂಪಡೆಯುವ) ಪ್ರಕ್ರಿಯೆಗೆ ತಾತ್ಕಾಲಿಕ ತಡೆ ಒಡ್ಡುವ ಆರ್‌ಬಿಐನ ‘ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್’ (SOP)ಗೆ ಸರ್ಕಾರ ಬೆಂಬಲ ಸೂಚಿಸಿದೆ. ದೇಶಾದ್ಯಂತ ಈ ನಿಯಮವನ್ನು ಏಕರೂಪವಾಗಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ. ಇದರಿಂದ ವಿಭಿನ್ನ ಹೈಕೋರ್ಟ್ ಆದೇಶಗಳ ಗೊಂದಲವನ್ನು ನಿವಾರಿಸಿ, ಹಣಕಾಸು ನಷ್ಟವನ್ನು ಗಣನೀಯವಾಗಿ ತಡೆಯಬಹುದು ಎಂಬುದು ಸರ್ಕಾರದ ವಾದವಾಗಿದೆ. ಇದರೊಂದಿಗೆ ಐಟಿ ಕಾಯ್ದೆ 2000ರ ಅಡಿ ಡಿಜಿಟಲ್ ಮಧ್ಯವರ್ತಿಗಳ ಮೇಲೂ ಹೊಣೆಗಾರಿಕೆ ನಿಗದಿಪಡಿಸಲು ಕಾನೂನು ತಿದ್ದುಪಡಿಗೆ ಸರ್ಕಾರ ಚಿಂತನೆ ನಡೆಸಿದೆ.
ಏನಿದು ಡಿಜಿಟಲ್ ಅರೆಸ್ಟ್?
ಪೊಲೀಸ್, ಸಿಬಿಐ, ಕಸ್ಟಮ್ಸ್ ಅಥವಾ ಇತರ ತನಿಖಾ ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡುವ ವಂಚಕರು, ನಕಲಿ ದಾಖಲೆಗಳನ್ನು ತೋರಿಸಿ “ನಿಮ್ಮ ಹೆಸರಿನಲ್ಲಿ ಅಕ್ರಮ ವ್ಯವಹಾರ ನಡೆದಿದೆ, ನಿಮ್ಮನ್ನು ಅರೆಸ್ಟ್ ಮಾಡಲಾಗುತ್ತದೆ, ನಿಮ್ಮ ಪಾಸ್‌ಪೋರ್ಟ್ ರದ್ದಾಗುತ್ತದೆ” ಎಂದು ಬೆದರಿಸುತ್ತಾರೆ. ಬಲೆಗೆ ಬೀಳುವ ಮುಗ್ಧರು, ಹಿರಿಯ ನಾಗರಿಕರು, ಅಧಿಕಾರಿಗಳಿಂದ ಭಾರಿ ಮೊತ್ತದ ಹಣವನ್ನು ‘ಸೆಕ್ಯುರಿಟಿ ಡೆಪಾಸಿಟ್’ ಅಥವಾ ‘ದಂಡ’ದ ಹೆಸರಿನಲ್ಲಿ ಸುಲಿಗೆ ಮಾಡುವುದನ್ನೇ ‘ಡಿಜಿಟಲ್ ಅರೆಸ್ಟ್’ ಎಂದು ಕರೆಯಲಾಗುತ್ತದೆ. 2024ರಲ್ಲಿ ಇಂತಹ ಪ್ರಕರಣಗಳು ಭಾರೀ ಏರಿಕೆ ಕಂಡಿರುವುದು ಈ ಬಿಗಿ ಕ್ರಮಗಳಿಗೆ ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ : ಕಲಿಮಾ ಪಠಿಸಲು ನಿರಾಕರಿಸಿದ್ದಕ್ಕೆ ಇಬ್ಬರು ಭದ್ರತಾ ಸಿಬ್ಬಂದಿಗೆ ಚಾಕು ಇರಿತ ; ಐಸಿಸ್ ಸೇರಲು ಬಯಸಿದ್ದ ‘ಒಂಟಿ ತೋಳ’ನ ಕೃತ್ಯ!



















