ವಿಜಯನಗರ : ರೈತರ ಜೀವನಾಡಿ ತುಂಗಭದ್ರಾ ಜಲಾಶಯದ 33 ನೂತನ ಗೇಟ್ ಅಳವಡಿಕೆ ಕಾರ್ಯ ಶನಿವಾರ ಸಂಪೂರ್ಣಗೊಂಡಿದೆ. ಸುಮಾರು 52 ಕೋಟಿ ವೆಚ್ಚದ ಈ ಬೃಹತ್ ಯೋಜನೆಯಡಿ ನೂತನ ಗೇಟ್‌ಗಳ ಅಳವಡಿಕೆ ಕಾರ್ಯವು ಇದೀಗ ಯಶಸ್ವಿಯಾಗಿದೆ.
ನೂತನ ಗೇಟ್ ಅಳವಡಿಕೆ ಕಾರ್ಯ ಡಿ.24, 2025 ರಿಂದ ಪ್ರಾರಂಭವಾಗಿದ್ದು, ಏ.25ಕ್ಕೆ ಸಂಪನ್ನಗೊಂಡಿದೆ. ಇನ್ನೂ ಸಣ್ಣಪುಟ್ಟ ಕೆಲಸಗಳಿದ್ದು, ಮೇ ಅಂತ್ಯದವರೆಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 2024ರ ಮಧ್ಯರಾತ್ರಿ ತುಂಗಭದ್ರಾ ಜಲಾಶಯದ ಗೇಟ್ ನಂ.19 ನೀರಿನ ರಭಸಕ್ಕೆ ಕಿತ್ತು ಹೋದ ಪರಿಣಾಮ 45,000 ಕ್ಯೂಸಕ್ ನೀರು ಸೋರಿಕೆ ಆಗಿತ್ತು. ಅಪಾರ ಪ್ರಮಾಣದ ನೀರು ನದಿ ಪಾಲಾಗಿತ್ತು. ಹೀಗಾಗಿ, 19ನೇ ಕ್ರಸ್ಟ್ ಗೇಟ್ ಜತೆಗೆ ಎಲ್ಲಾ 33 ಗೇಟ್‌ಗಳನ್ನೂ ಹೊಸದಾಗಿ ಅಳವಡಿಸುವ ಕಾರ್ಯವನ್ನು 2025ರ ಡಿಸೆಂಬರ್ 24ರಿಂದ ಆರಂಭಿಸಲಾಗಿತ್ತು.
ಸಾಕಷ್ಟು ಸವಾಲುಗಳ ಮಧ್ಯೆಯೂ 121 ದಿನಗಳ ಕಾಲ ಕೆಲಸ ನಿರ್ವಹಿಸುವ ಮೂಲಕ 33 ಕ್ರಸ್ಟ್ ಗೇಟ್‌ಗಳ ಅಳವಡಿಕೆಗೆ ತಜ್ಞರು, ಅಧಿಕಾರಿಗಳು, ಕಾರ್ಮಿಕರು ಶ್ರಮಿಸಿದ್ದಾರೆ. ಇದೀಗ, 33 ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿರುವುದರಿಂದ ಟಿ.ಬಿ ಬೋರ್ಡ್ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ದಾಳಿ : ಟ್ರಂಪ್ ಸೇಫ್, ಶೂಟರ್ ಸೆರೆ!


















